ಬೆಂಗಳೂರು: ಕಾರಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಹೋಟೆಲ್ ಉದ್ಯಮಿ ಆತ್ಮಹತ್ಯೆ
ಬೆಂಗಳೂರು: ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿಯ ಮುದ್ದಿನಪಾಳ್ಯದಲ್ಲಿ ವರದಿಯಾಗಿದೆ.
ನಾಗರಭಾವಿ ಎರಡನೇ ಹಂತದ ನಿವಾಸಿ ಪ್ರದೀಪ್ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೋಟೆಲ್ ಉದ್ಯಮ ನಡೆಸುತ್ತಿದ್ದ ನಿವಾಸಿ ಪ್ರದೀಪ್, ಶನಿವಾರ ಕಾರು ಚಲಾಯಿಸಿಕೊಂಡು ಬಂದು ಮುದ್ದಿನಪಾಳ್ಯದ ಬಡಾವಣೆ ಬಳಿ ಕಾರು ನಿಲ್ಲಿಸಿ ಕೆಲವು ಕಾಲ ಕಾರಿನಲ್ಲಿ ಕುಳಿತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು ನೋಡಿದಾಗ ಕಾರಿನೊಳಗೆ ಓರ್ವ ವ್ಯಕ್ತಿ ಇರುವುದನ್ನು ಗಮನಿಸಿದ್ದರು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದರೂ ಕಾರಿನೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ.