ʼವಿಜಯೇಂದ್ರ ವಿರುದ್ಧದ 150 ಕೋಟಿ ರೂ. ಆಮಿಷ ಆರೋಪʼ | ವಿಧಾನಸಭೆಯಲ್ಲಿ ಪ್ರತಿಧ್ವನಿ, ಸಿಬಿಐ ತನಿಖೆಗೆ ವಹಿಸಲು ಆಗ್ರಹ

Update: 2024-12-16 07:42 GMT

ಬಿ.ವೈ.ವಿಜಯೇಂದ್ರ 

ಬೆಳಗಾವಿ : ‘ವಕ್ಫ್ ಆಸ್ತಿ ಕಬಳಿಕೆ ಸಂಬಂಧದ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150ಕೋಟಿ ರೂ.ಆಮಿಷವೊಡ್ಡಿದ್ದಾರೆಂಬ ಆರೋಪ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂಬ ಆಗ್ರಹವು ಕೇಳಿಬಂದಿದೆ.

ಸೋವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸದನದಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರು 150 ಕೋಟಿ ರೂ. ಸುಳ್ಳು ಆರೋಪ ಮಾಡಿದ್ದು, ಈ ಬಗ್ಗೆ ಸ್ಪಷ್ಟಣೆ ನೀಡಲು ಅವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಖುದ್ದು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರೇ ಹೇಳಿಕೆ ನೀಡಿದ್ದು, ಅದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಹೀಗಾಗಿ ಆ ಹೇಳಿಕೆಯನ್ನಷ್ಟು ಉಲ್ಲೇಖ ಮಾಡಿದ್ದೇನೆ ಎಂದರು. ಬಿಜೆಪಿ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್, ವಿಜಯೇಂದ್ರಗೆ ಸ್ಪಷ್ಟಣೆ ನೀಡಲು ಅವಕಾಶ ಕಲ್ಪಿಸಿದರು.

ಎಲ್ಲವನ್ನೂ ಸಿಬಿಐಗೆ ವಹಿಸಲಿ: ‘ಸಚಿವ ಪ್ರಿಯಾಂಕ್ ಖರ್ಗೆ ನನ್ನ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಹಿಂದಿನ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹೆಸರು ಹೇಳಿ ನನ್ನ ಮೇಲೆ ಆರೋಪ ಮಾಡಲಾಗಿದೆ. ವಕ್ಫ್ ಆಸ್ತಿ ದುರುಪಯೋಗ ಕುರಿತು ಅನ್ವರ್ ಮಾಣಿಪ್ಪಾಡಿ ವರದಿ ಕೊಟ್ಟಿದ್ದರು. ನಂತರ ಉಪಲೋಕಾಯುಕ್ತ ನ್ಯಾ.ಆನಂದ್ ವರದಿ ಕೊಟ್ಟಿದ್ದರು. 2016ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದರು. ಆದರೆ ಅಂದಿನ ಸಿಎಂ ಉಪಲೋಕಾಯುಕ್ತರ ವರದಿ ಮುಚ್ಚಿ ಹಾಕಿದ್ದರು ಎಂದು ದೂರಿದರು.

‘ಅಲ್ಪಸಂಖ್ಯಾತರ ಆಯೋಗದ ಹಿಂದಿನ ಅಧ್ಯಕ್ಷರು ಸರಕಾರಕ್ಕೆ ಶಿಫಾರಸು ಸಲ್ಲಿಸಿದ್ದನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಸಂಪುಟ ತಿರಸ್ಕರಿಸಿತು. ಸಿಎಂ ಸಿದ್ದರಾಮಯ್ಯನವರಿಗೆ ಇದೀಗ ಸಿಬಿಐ ಬಗ್ಗೆ ಬಹಳ ವಿಶ್ವಾಸ ಮೂಡಿದಂತೆ ಇದೆ. ಹೀಗಾಗಿ ನನ್ನ ವಿರುದ್ಧದ 150 ಕೋಟಿ ರೂ.ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ’ ಎಂದು ವಿಜಯೇಂದ್ರ ಸವಾಲು ಹಾಕಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ) ಸೇರಿದಂತೆ ವಿವಿಧ ಹಗರಣಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗೆ ಸಿಎಂ ಹಿಟ್ ಅಂಡ್ ರನ್ ಮಾಡುವುದು ಬೇಡ. ಅವರಿಗೆ ಧೈರ್ಯವಿದ್ದರೆ ಕೂಡಲೇ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿ. ಕೋವಿಡ್ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆ ಮೂಲಕ ಅವರ ತೇಜೋವಧೆ ಮಾಡಲಾಗುತ್ತಿದೆ. ಆದರೆ, ಬಿಎಸ್‍ವೈ ಕುಟುಂಬ ಹೆದರಿ ಓಡಿ ಹೋಗುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು, ಈ ಸರಕಾರಕ್ಕೆ ತಾಕ್ಕತ್ತಿದ್ದರೆ ವಿಜಯೇಂದ್ರ ಅವರ ವಿರುದ್ಧದ ಆರೋಪವು ಸೇರಿದಂತೆ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪ ನಡೆಯಿತು. ಆಗ ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಹೇಳಿಕೆಯ ಬಗ್ಗೆ ವಿವರಣೆ ನೀಡಲು ಮುಂದಾದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಈ ಮಧ್ಯೆ ಸ್ಪೀಕರ್ ಖಾದರ್, ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿದ್ದರಿಂದ ಆ ಚರ್ಚೆ ಕೊನೆಯಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News