ಬೆಳಗಾವಿ | ರೈಲಿನಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣದ ತನಿಖೆಗೆ 4 ವಿಶೇಷ ತಂಡ ರಚನೆ: ಎಸ್.ಡಿ.ಶರಣಪ್ಪ
ಬೆಳಗಾವಿ, ಮೇ 17: ರೈಲಿನಲ್ಲಿ ಗುತ್ತಿಗೆ ಸಿಬ್ಬಂದಿಯೋರ್ವನ್ನು ಮಾರಕಾಯುಧದಿಂದ ಇರಿದು ಕೊಲೆಗೈದು ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಡಿಐಜಿ ಎಸ್.ಡಿ. ಶರಣಪ್ಪ ಹೇಳಿದ್ದಾರೆ.
ಅವರಿಂದು ಖಾನಾಪುರ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ನಡೆದ ಈ ಘಟನೆಯಲ್ಲಿ ಮುಸುಕುಧಾರಿಯಿಂದ ಹಲ್ಲೆಗೆ ಒಳಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೃತ್ಯ ಎಸಗಿದ ಬಳಿಕ ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ರೈಲ್ವೆ ಪ್ರೋಟೆಕ್ಷನ್ ಫೋರ್ಸ್(ಆರ್ಪಿಎಫ್), ಗ್ರೇಟರ್ ರೈಲ್ವೆ ಪೊಲೀಸ್(ಜಿಆರ್ಪಿ) ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಡಿಐಜಿ ಎಸ್.ಡಿ. ಶರಣಪ್ಪ ತಿಳಿಸಿದರು.
ಪುದುಚೇರಿ–ದಾದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಟಿಇ ಅಶ್ರಫ್ ಕಿತ್ತೂರ ಟಿಕೆಟ್ ತಪಾಸಣೆ ಮಾಡುತ್ತಿದ್ದ ವೇಳೆ ಮುಸುಕುಧಾರಿ ಪ‍್ರಯಾಣಿಕನೋರ್ವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಟಿಟಿಇ ನೆರವಿಗೆ ಧಾವಿಸಿದ ಆನ್ ಮೋಡ್ ಹೌಸ್ಕೀಪಿಂಗ್ ಸ್ಟಾಫ್ ದೇವರ್ಷಿ ವರ್ಮಾ(23)ರಿಗೆ ಆಗಂತುಕ ಮಾರಕಾಯುಧದಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.