ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ : ಉಭಯ ಸದನಗಳಲ್ಲಿ ಪ್ರತಿಧ್ವನಿ, ಗದ್ದಲ-ಕೋಲಾಹಲ
ಬೆಳಗಾವಿ : ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಚಳುವಳಿನಿರತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಘಟನೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ, ಏರಿದ ಧ್ವನಿಯಲ್ಲಿ ಗದ್ಧಲ, ಕೋಲಾಹಲಕ್ಕೆ ಕಾರಣವಾಯಿತು.
ಗುರುವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಹೋರಾಟ ಮಾಡುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ, ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚಕ ನಿರ್ಣಯ ಮಂಡಿಸಿ, ಆ ಬಳಿಕ ಈ ವಿಚಾರ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರೂ ಗದ್ದಲ ನಿಲ್ಲಲಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ‘ಈ ಸದನದಲ್ಲಿ ನಮ್ಮ-ನಿಮ್ಮ ಹಾಗೆಯೇ ಜನಸೇವೆ ಮಾಡಿದ್ದ ಇಬ್ಬರು ಶಾಸಕರಾದ ಜಯಣ್ಣ ಮತ್ತು ಆರ್.ನಾರಾಯಣ್ ನಮನ್ನು ಅಗಲಿದ್ದಾರೆ. ಅವರಿಗೆ ಮೊದಲು ಸಂತಾಪ ಸೂಚನೆ ಮಂಡಿಸಿ ಅವರ ಕುಟುಂಬದ ದುಃಖವನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಮೊದಲು ಅದಕ್ಕೆ ಅವಕಾಶ ಮಾಡಿಕೊಡಿ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.
ಸಂತಾಪ ಸೂಚನೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಇವ ನಮ್ಮವ, ಇವ ನಮ್ಮವ’ ಎಂದು ಸಿಎಂ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಸವಣ್ಣನ ವಚನವನ್ನು ಉಲ್ಲೇಖಿಸುತ್ತಾರೆ. ಆದರೆ, ಬಸವಣ್ಣರ ಭಕ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಘಟನೆ ರಾಜ್ಯ ಸರಕಾರದ ವೈಫಲ್ಯಕ್ಕೆ ಸಾಕ್ಷಿ. ಕೂಡಲೇ ಈ ಘಟನೆ ಬಗ್ಗೆ ಸರಕಾರ ಕ್ಷಮೆ ಕೋರಬೇಕು. ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ, ಆರೆಸೆಸ್ಸ್ ಪ್ರಾಯೋಜಿತ :
ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯ ವಿಜಯಾನಂದ ಕಾಶೆಪ್ಪನವರ್, ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಪ್ರಹಾರ ನಡೆಸಿರುವುದು ವಿಷಾದದ ಸಂಗತಿ. ಆದರೆ, ಈ ಹೋರಾಟ ಸಂಪೂರ್ಣ ಬಿಜೆಪಿ, ಆರೆಸೆಸ್ಸ್ ಪ್ರಾಯೋಜಿತವೇ ಹೊರತು ಪಕ್ಷಾತೀತ ಹೋರಾಟವಲ್ಲ. ಯಾವುದೇ ಸಮುದಾಯದ ಮೀಸಲಾತಿ ಹೆಚ್ಚಿಸಲು ಸರಕಾರಕ್ಕೆ ಅವಕಾಶವಿಲ್ಲ. ಹೀಗಿರುವಾಗಿ ಚುನಾವಣೆ ಸಂದರ್ಭದಲ್ಲಿ ಕೇವಲ ಕಣ್ಣೋರೆಸುವ ತಂತ್ರದ ಭಾಗವಾಗಿ ಪ್ರವರ್ಗ 2 ‘ಡಿ’ ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರಕಾರ ಪ್ರಕಟಿಸಿತ್ತು ಎಂದು ದೂರಿದರು. ಇದರಿಂದ ಕೆರಳಿದ ವಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ಗದ್ದಲ ತೀವ್ರ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಎರಡು ಬಾರಿ ಸದನವನ್ನು ಮುಂದೂಡಿದರು.
ಮೇಲ್ಮನೆಯಲ್ಲಿಯೂ ಗದ್ದಲ:
ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದರೆ, ‘ಸರಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡರು.
ಗುರುವಾರ ವಿಧಾನ ಪರಿಷತ್‍ನಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ, ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರ ಪ್ರಸ್ತಾಪಿಸಿ ಸರಕಾರ ಪ್ರತಿಭಟನೆ ಹತ್ತಿಕ್ಕಿದೆ, ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಆಗ ಪ್ರತಿಕ್ರಿಯಿಸಿದ ಡಾ.ಜಿ. ಪರಮೇಶ್ವರ್, ‘ಪ್ರತಿಭಟನಾಕಾರರು ಕಾನೂನು ಮತ್ತು ಸುವ್ಯವಸ್ಥಗೆ ಭಂಗ ತರುವ ರೀತಿಯಲ್ಲಿ ಆದೇಶಗಳನ್ನು ಉಲ್ಲಂಘಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರಣ ಲಘು ಲಾಠಿ ಪ್ರಹಾರ ನಡೆಸಲಾಗಿದ್ದು, ಪ್ರತಿಭಟನಾಕಾರರನ್ನು ಮುಂಜಾಗ್ರತಾ ಬಂಧನ ಮಾತ್ರ ನಡೆಸಲಾಗಿತ್ತು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸರಕಾರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಲಾಠಿ ಪ್ರಹಾರದಿಂದ ನೂರಾರು ಹೋರಾಟಗಾರರು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಇದಕ್ಕೆ ಸರಕಾರವೇ ಹೊಣೆಯಾಗಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದರು. ಈ ವೇಳೆ ಸರಕಾರದ ಕ್ರಮನ್ನು ಖಂಡಿಸಿ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್, ಧನಂಜಯ ಸರ್ಜಿ ಸಹಿತ ಹಲವರು ಸದನದ ಬಾವಿಗೆ ಇಳಿದು ಸರಕಾರಕ್ಕೆ ಧಿಕ್ಕಾರ ಕೂಗಿದರು.