ಮುನಿರತ್ನ ವಿರುದ್ಧದ ಅತ್ಯಾಚಾರ, ಜಾತಿ ನಿಂದನೆ ವಿಷಯ ಪ್ರಸ್ತಾಪಕ್ಕೆ ಆಡಳಿತ ಪಕ್ಷದ ಸದಸ್ಯರ ಪಟ್ಟು : ಪ್ರತಿಪಕ್ಷಗಳ ಸಭಾತ್ಯಾಗ

Update: 2024-12-13 10:47 GMT

ಬೆಳಗಾವಿ : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ, ಜಾತಿ ನಿಂದನೆ ಮತ್ತು ಎಚ್‍ಐವಿ ರೋಗ ಸೋಂಕಿಸಿ ವಿವಿಧ ಗಣ್ಯರ ಜೀವಕ್ಕೆ ಅಪಾಯ ತರುವ ಪ್ರಯತ್ನ ಹಾಗೂ ವಕ್ಫ್ ವಿಚಾರ ಪ್ರಸ್ತಾಪ ಸಂಬಂಧ ಆಡಳಿತ-ವಿಪಕ್ಷಗಳ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಆಡಳಿತ ಪಕ್ಷದ ನಡವಳಿಕೆಗೆ ಆಕ್ಷೇಪಿಸಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಅಲ್ಪಾವಧಿ ಚರ್ಚೆಯಡಿ ವಿಪಕ್ಷ ನಾಯಕ ಆರ್.ಅಶೋಕ್, ವಕ್ಫ್ ಆಸ್ತಿ ಗೊಂದಲ ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರಾದ ಪಿ.ಎಂ.ನರೇಂದ್ರಸ್ವಾಮಿ, ನಯನ ಮೋಟಮ್ಮ, ಶರತ್ ಬಚ್ಚೇಗೌಡ, ನಾವು ನಿಲುವಳಿ ಸೂಚನೆಯಡಿ ನೋಟಿಸ್ ನೀಡಿದ್ದು, ಮುನಿರತ್ನ ಜಾತಿನಿಂದನೆ ಪ್ರಕರಣ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಈ ಮಧ್ಯೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಳೆಹಾನಿ ಕುರಿತು ಸ್ವಯಂ ಪ್ರೇರಿತ ಹೇಳಿಕೆ ನೀಡಬೇಕು. ಹೀಗಾಗಿ ಅವಕಾಶ ಕಲ್ಪಿಸಿ ಎಂದು ಸ್ಪೀಕರ್‌ ಗೆ ಮನವಿ ಮಾಡಿದರು. ಸ್ಪೀಕರ್ ಖಾದರ್, ಕಂದಾಯ ಸಚಿವರ ಹೇಳಿಕೆಗೆ ಅವಕಾಶ ಮಾಡಿಕೊಟ್ಟರು. ಈ ವೇಳೆಗ ಆಡಳಿತ ಪಕ್ಷದ ಶಾಸಕರು ಏರಿದ ಧ್ವನಿಯಲ್ಲಿ ಗದ್ದಲ ಎಬ್ಬಿಸಿದರು. ಇದಕ್ಕೆ ಪ್ರತಿಯಾಗಿ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‍ನಿಂದಲೂ ಪ್ರತಿಯಾಗಿ ಗದ್ದಲಕ್ಕೆ ಮುಂದಾದರು. ಈ ಹಂತದಲ್ಲಿ ಗದ್ದಲ ಹೆಚ್ಚಾಯಿತು.

ಆಗ ವಿಪಕ್ಷ ನಾಯಕ ಆರ್.ಅಶೋಕ್ ಈ ಸರಕಾರಕ್ಕೆ ಸರಿಯಾಗಿ ಸದನ ನಡೆಸಲು ಬರುವುದಿಲ್ಲ. ವಿಪಕ್ಷವಾಗಿ ನಾವು ಸಹಕಾರ ಕೊಡುತ್ತೇವೆಂದರೂ ಆಡಳಿತ ಪಕ್ಷದ ಶಾಸಕರೇ ಅತಿರೇಕದ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಮಾತಿನ ಚಕಮಕಿ, ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರ ನಡವಳಿಕೆ ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್ ಶಾಸಕರು ಅವರನ್ನು ಅನುಸರಿಸಿದರು.

ಬಿಜೆಪಿ ಸದಸ್ಯ ಎಸ್.ಟಿ.ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲಿ ಕುಳಿತಿದ್ದರು. ಶಿವರಾಮ್ ಹೆಬ್ಬಾರ್ ಅವರ ಬಳಿ ಬಂದು ಕುಳಿತುಕೊಂಡರು. ಕಂದಾಯ ಸಚಿವ ಕೃಷ್ಣಭೈರೇಗೌಡ, ಇದು ಮಹತ್ವದ ವಿಚಾರ. ಮಳೆ ಹಾನಿಯಾಗಿದೆ. ವಿಪಕ್ಷಗಳು ಸಹಕಾರ ಮಾಡಬೇಕು. ಸಭಾತ್ಯಾಗ ಮಾಡಬಾರದು. ಹಾನಿ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News