ಬೆಳಗಾವಿ | ವಿಧಾನಸಭೆಯಲ್ಲಿ ಮಹನೀಯರ ತೈಲವರ್ಣ ಚಿತ್ರಗಳ ಅನಾವರಣ

Update: 2024-12-16 14:06 GMT

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನ ಸಭೆಯ ಸದನದೊಳಗೆ ಸೋಮವಾರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಹಾಗೂ ಸಮಾಜ ಸೇವೆಗೈದ ಮಹನೀಯರ ತೈಲವರ್ಣ ಚಿತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಆಧ್ಯಾತ್ಮಿಕ ಚಿಂತಕ ಸ್ವಾಮಿ ವಿವೇಕಾನಂದ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಮರು ವಿನ್ಯಾಸಗೊಂಡ ಹಾಗೂ ದೇಶದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್, ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‍ಲಾಲ್ ನೆಹರು, ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಮತ್ತು ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ತೈಲ ವರ್ಣಚಿತ್ರಗಳನ್ನು ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿ ಹಾಗೂ ಪರ್ತಕತ್ರರ ಗ್ಯಾಲರಿ ಮೇಲ್ಬಾಗ ಅಳವಡಿಸಲಾಗಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷರು ತಮ್ಮ ವಿವೇಚನೆ ಬಳಸಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು, ಸಮಾಜ ಸುಧಾರಣೆ ಕೈಗೊಂಡ ಮಹಿನೀಯರು, ರಾಷ್ಟ್ರನಾಯಕರ ವರ್ಣಚಿತ್ರಗಳನ್ನು ವಿಧಾನಸಭೆಯಲ್ಲಿ ಅಳವಡಿಸಿದ್ದು, ಇದಕ್ಕೆ ಯಾರ ವಿರೋಧವು ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಇಂದು ಅನಾವರಣಗೊಳಿಸಿರುವ ತೈಲಚಿತ್ರಗಳಲ್ಲಿರುವ ಮಹನೀಯರ ಬಗ್ಗೆ ಸದನಕ್ಕೆ ತಿಳಿಸಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ನಿಜವಾದ ಭಾರತೀಯರಾದವರಿಗೆ ಈ ಮಹನೀಯರ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇತಿಹಾಸ ಓದಿದ ಎಲ್ಲರಿಗೂ ಇವರ ಬಗ್ಗೆ ತಿಳಿದೆ ಇರುತ್ತದೆ ಎಂದರು. ಆಗ ಅಶೋಕ್ ಮಾತನಾಡಿ, ತೈಲವರ್ಣಚಿತ್ರದಲ್ಲಿರುವ ಎಲ್ಲ ಮಹನೀಯರ ಬಗ್ಗೆ ನಮಗೆ ಅಪಾರ ಗೌರವವಿದೆ. ದೇಶಕ್ಕೆ ಅವರ ಕೊಡುಗೆ ಅಪಾರ ಎಂದರು.

ನಂತರ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಅಪ್ರತಿಮ ದೇಶ ಸೇವೆ, ಸಮಾಜ ಸೇವೆ ಹಾಗೂ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ದಿವಂಗತರಾದವರ ವರ್ಣಚಿತ್ರಗಳನ್ನು ವಿಧಾನ ಸಭೆಯಲ್ಲಿ ಅಳವಡಿಸಲಾಗಿದೆ. ಕೆಲವು ಸದಸ್ಯರು ಬಸವಣ್ಣನವರ ವರ್ಣಚಿತ್ರ ಬದಲಾಯಿಸುವಂತೆ 3 ದಿನಗಳ ಹಿಂದೆ ತಿಳಿಸಿದ್ದಾರೆ. ಈ ಕುರಿತು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

18 ವರ್ಷದವರಿಗೆ ಮತದಾನದ ಹಕ್ಕು ನೀಡಿ, ಭಾರತವು ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಕೊಡುಗೆ ನೀಡಿ, ದೇಶದ ದಕ್ಷಿಣ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸಿ, ಉಗ್ರರ ಕೈಯಿಂದ ಹತರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ವರ್ಣಚಿತ್ರವನ್ನು ವಿಧಾನಸಭೆಯಲ್ಲಿ ಅಳವಡಿಸುವ ಇಂಗಿತವನ್ನು ಯು.ಟಿ.ಖಾದರ್ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಕೆಲ ಶಾಸಕರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವರ್ಣಚಿತ್ರವನ್ನು ಅಳವಡಿಸುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಇನ್ನಿತರರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವರ್ಣಚಿತ್ರವನ್ನು ಹಾಕುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ಇಲ್ಲಿ ನಾವು ಅಳವಡಿಸಿರುವ ವರ್ಣಚಿತ್ರಗಳು ದೇಶಕ್ಕೆ, ಸಮಾಜಕ್ಕೆ ಕೊಡುಗೆ ನೀಡಿ ದಿವಂಗತರಾದ ಮಹನೀಯರದ್ದು. ಅವರ ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಎಂದು ಹೇಳಿದರು.

ವರ್ಣಚಿತ್ರಗಳ ಅನಾವರಣದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇತರ ಸಚಿವರು ಹಾಗೂ ವಿಧಾನಸಭೆಯ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News