ಬೆಳಗಾವಿ ಅಧಿವೇಶನ | ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ : ‘ನ್ಯಾಯಾಂಗ ತನಿಖೆ’ಗೆ ಪಟ್ಟು ಹಿಡಿದು ಬಿಜೆಪಿ ಸಭಾತ್ಯಾಗ

Update: 2024-12-16 14:31 GMT

ಬೆಳಗಾವಿ : ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಕೂಡಲಸಂಗಮದ ಬಸವ ಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಲಾಠಿ ಪ್ರಹಾರದ ವಿಚಾರ ಸೋಮವಾರ ವಿಧಾನ ಪರಿಷತ್ ಕಲಾಪದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಯಾವುದೇ ತನಿಖೆಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಕಲಾಪ ಬಹಿಷ್ಕರಿಸಿ ಲಾಠಿ ಬೀಸುವ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು.

ಪಂಚಮಸಾಲಿ ಹೋರಾಟಗಾರರ ಮೇಲೆ ಸರಕಾರ ಲಾಠಿ ಚಾರ್ಜ್ ಮಾಡಿಸಿದ ಪ್ರಕರಣ ತನಿಖೆಗೆ ಒತ್ತಾಯಿಸಿ ವಿಧಾನ ಪರಿಷತ್‍ನಲ್ಲಿ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು. ಇದಕ್ಕೆ ಸರಕಾರದ ಪರವಾಗಿ ಸೋಮವಾರ ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪಂಚಮಸಾಲಿ ಹೋರಾಟದಲ್ಲಿ 11 ಜನರಿಗೆ ಗಾಯಳಾಗಿದ್ದವು. ಅವರಿಗೆ ನೀಡಬೇಕಾದ ಅಗತ್ಯ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇನ್ನು 23 ಪೊಲೀಸರಿಗೆ ಕಲ್ಲೇಟು ಬಿದ್ದಿದೆ. ಇವರಿಗೆ ಚಿಕಿತ್ಸೆ ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂತು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ವಿರೋಧಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾಲ್ವರು ಗಾಯಾಳುಗಳು ಐಸಿಯುದಲ್ಲಿದ್ದರು. ರಾತ್ರೋರಾತ್ರಿ ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಆದರೆ, ನಮ್ಮ ಹಕ್ಕು ಕೇಳಿ ಪ್ರತಿಭಟಿಸುವಾಗ ಈ ರೀತಿ ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ನಮ್ಮ ಮೇಲೆ ಗೋಲಿಬಾರ್ ಮಾಡಲೂ ಸರಕಾರ ಸಿದ್ಧವಾಗಿತ್ತು ಎಂದು ಪಂಚಮಸಾಲಿ ಸ್ವಾಮೀಜಿ ಹೇಳಿದ್ದಾರೆ. ಹಾಗಾಗಿ, ಸರಕಾರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಪಂಚಮಸಾಲಿ ಹೋರಾಟ ಏಕಾಏಕಿ ಶುರುವಾಗಿದ್ದಲ್ಲ. ಸರಕಾರವೇ ಅನುಮತಿ ನೀಡಿದೆ. ಅಲ್ಲದೇ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಹೋರಾಟವಿದು. ಸರಕಾರ ನಡೆಸಿರುವ ಲಾಠಿ ಚಾರ್ಜ್ ಸಮರ್ಥಿಸಿಕೊಂಡು, ತನಿಖೆ ಮಾಡುವ ಅಗತ್ಯವಿಲ್ಲ ಎನ್ನುವುದು ಸರ್ವಾಧಿಕಾರಿ ಮನೋಭಾವನೆ ಆಗುತ್ತದೆ. ಪಂಚಮಸಾಲಿಗರು ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿರಲಿಲ್ಲ. ಮಾರಕಾಸ್ತ್ರಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದವರಿಗೆ ಅಮಾಯಕರು ಎನ್ನುತ್ತೀರಿ. ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದಿರಿ ಎಂದು ಕಿಡಿಕಾರಿದರು.

ಈ ವೇಳೆ ಕಾಂಗ್ರೆಸ್‍ನ ಹರಿಪ್ರಸಾದ್, ನಜೀರ್ ಅಹ್ಮದ್, ಯತೀಂದ್ರ ಸೇರಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿ.ಟಿ.ರವಿ ಮಾತಿಗೆ ಕೆಂಡಾಮಂಡಲರಾದರು. ಡಾ.ಜಿ.ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ನ್ಯಾಯಾಂಗ ತನಿಖೆ ಅಥವಾ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದರು. ನ್ಯಾಯಾಂಗ ತನಿಖೆ ಸೇರಿ ಯಾವುದೇ ತನಿಖೆ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಕಲಾಪ ಬಹಿಷ್ಕರಿಸಿ ಸದನದದಿಂದ ಹೊರನಡೆದರು.

‘ಪಂಚಮಸಾಲಿ ಹೋರಾಟದ ಲಾಠಿ ಚಾರ್ಜ್ ಬಗ್ಗೆ ಯಾವುದೇ ತನಿಖೆ ಇಲ್ಲ. ಪಂಚಮಸಾಲಿ ಹೋರಾಟದ ಕುರಿತಂತೆ ಪ್ರತಿಭಟನಾಕಾರರಿಗೆ ಪ್ರತಿಭಟನೆಗೆ ಜಾಗ ನಿಗದಿಪಡಿಸಲಾಗಿತ್ತು, 10ಸಾವಿರ ಮಂದಿ ಸೇರಲು ಅವಕಾಶ ನೀಡಲಾಗಿತ್ತು. ಅವರ ಮನವಿ ಆಲಿಸಲು 3 ಮಂದಿ ಸಚಿವರನ್ನು ಕಳುಹಿಸಲಾಗಿತ್ತು. ಆದರೆ ಪ್ರತಿಭಟನೆ ಸ್ಥಳಕ್ಕೆ ಮುಖ್ಯಮಂತ್ರಿಗಳು ಬರಬೇಕೆಂದು ಪಟ್ಟು ಹಿಡಿದು, ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಲಘು ಲಾಠಿ ಪ್ರಹಾರ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಕೈಗೊಂಡ ಕ್ರಮ ತೆರೆದ ಪುಸ್ತಕದಂತೆ ಇದ್ದು ಯಾವುದೇ ತನಿಖೆ ನಡೆಸುವ ಅಗತ್ಯವೇ ಇಲ್ಲ’

-ಡಾ.ಜಿ.ಪರಮೇಶ್ವರ್, ಗೃಹ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News