ಬೆಳಗಾವಿ ಆಧಿವೇಶನ | ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಿನಕರ್ ಶೆಟ್ಟಿ ಮನವಿ
ಬೆಳಗಾವಿ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು ಎಂದು ಬಿಜೆಪಿ ಸದಸ್ಯ ದಿನಕರ್ ಶೆಟ್ಟಿ ಮನವಿ ಮಾಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯೂ ಉತ್ತರ ಕರ್ನಾಟಕಕ್ಕೂ ಸೇರಿಲ್ಲ, ಕಲ್ಯಾಣ ಕರ್ನಾಟಕಕ್ಕೂ ಸೇರಿಲ್ಲ. ತ್ಯಾಗ ಮಾಡಿರುವ ಜಿಲ್ಲೆ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಬರ್ಡ್ ಇದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಇಲ್ಲ. ಕೈಗಾದಲ್ಲಿ ಅಣುಸ್ಥಾವರ ಇದೆ. ಅದರಿಂದ ಹೇಗೆಲ್ಲ ದುಷ್ಪರಿಣಾಮಗಳು ಆಗುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್, ಬಿಜೆಪಿ, ಜನತಾ ದಳ ಯಾವುದೇ ಪಕ್ಷದ ಸರಕಾರವಿರಲಿ, ನಮ್ಮ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಏನಾದರೂ ಅನಾಹುತಗಳು ಆದರೆ ರೋಗಿಗಳನ್ನು, ಸಂತ್ರಸ್ತರನ್ನು ಕರೆದುಕೊಂಡು ಮಂಗಳೂರು ಅಥವಾ ಮಣಿಪಾಲಕ್ಕೆ ಬರಬೇಕು. ಇಲ್ಲವೇ ಗೋವಾಗೆ ಹೋಗಬೇಕು. ಕುಮಟಾ ಮಧ್ಯವರ್ತಿ ಸ್ಥಳವಾಗಿರುವುದರಿಂದ ಸರಕಾರ ಇಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಈ ಭಾಗದ ಜನರ ಜೀವ ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ ಎಂದು ದಿನಕರ್ ಶೆಟ್ಟಿ ಹೇಳಿದರು.
ವೈದ್ಯಕೀಯ ಕಾಲೇಜು ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಾಮ ಕೇರ್ ಸೆಂಟರ್ ಅನ್ನು ಆರಂಭಿಸಬೇಕು. ನಮ್ಮಲ್ಲಿ ಸಿಹಿ ಈರುಳ್ಳಿ ಬೆಳೆಯುತ್ತಾರೆ. ಆ ಬೆಳೆಯನ್ನು ದಾಸ್ತಾನು ಮಾಡಲು ಶೈತ್ಯಾಗಾರದ ಅಗತ್ಯವಿದೆ. ಅಘನಾಶಿನಿ ನದಿಗೆ 150 ಕೋಟಿ ರೂ.ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ 9 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದರಿಂದ ಅದನ್ನು ಭರ್ತಿ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.