ಬೆಳಗಾವಿ ಅಧಿವೇಶನ | ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ಒಳಮೀಸಲಾತಿ, ಮುಡಾ ಪ್ರಕರಣ
ಬೆಳಗಾವಿ : ಒಳ ಮೀಸಲಾತಿ ಹಾಗೂ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಮಂಗಳವಾರ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಮುಡಾ ಹಗರಣ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂಬ ಬಿಜೆಪಿ ನಾಯಕರ ಬೇಡಿಕೆಗೆ ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ತೀಕ್ಷ್ಣವಾಗಿ ಉತ್ತರ ನೀಡುವ ಮೂಲಕ ಅವರ ನಿಲುವನ್ನು ಪ್ರಶ್ನಿಸಿದರು.
ಆರೆಸ್ಸೆಸ್ ಮತ್ತು ಸಂಘ ಪರಿವಾರಕ್ಕೆ ಮಂಜೂರಾದ ಜಮೀನು ಮತ್ತು ಈ ಜಮೀನುಗಳಿಗೆ ಎಷ್ಟು ಹಣ ನೀಡಿದ್ದಾರೆ ಎಂಬುದರ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಬೇಕು. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಬಲಪಂಥೀಯ ಸಂಘಟನೆಗಳ ಭೂ ವ್ಯವಹಾರಗಳ ಕುರಿತು ಹೆಚ್ಚಿನ ಪರಿಶೀಲನೆ ಆಗಬೇಕು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು
ಇನ್ನು ಸುಪ್ರೀಂ ಕೋರ್ಟ್‍ನ ತೀರ್ಪನ್ನು ಉಲ್ಲೇಖಿಸಿದಾಗ ಒಳಮೀಸಲಾತಿ ವಿಷಯದತ್ತ ಚರ್ಚೆ ಹೊರಳಿತು. ಸುಪ್ರೀಂ ಕೋರ್ಟ್ ಒಳ ಮೀಸಲಾತಿಗೆ ನಿರ್ದೇಶನ ನೀಡಿದೆ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಜಾರಿಗೊಳಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಪಾದಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ. ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರವೇ ನಿರ್ಧಾರ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ನಾವು ಮಾಜಿ ಸಚಿವ ಮಾಧುಸ್ವಾಮಿ ಅವರ ವರದಿಯನ್ನು ಜಾರಿಗೊಳಿಸಿದ್ದೇವೆ. ಅದರಡಿ ಎಲ್ಲಾ ಸಮುದಾಯಗಳಿಗೆ ನ್ಯಾಯವನ್ನು ನೀಡಿದ್ದೇವೆ. ಜನರು ನ್ಯಾ.ಸದಾಶಿವ ಆಯೋಗದ ವರದಿಯನ್ನು ಒಪ್ಪುತ್ತಿಲ್ಲ. ಸರಕಾರ ಮಾಧುಸ್ವಾಮಿ ವರದಿಯನ್ನು ಬೆಂಬಲಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.