ಬೆಳಗಾವಿ ಅಧಿವೇಶನ | ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಬೆಳಗಾವಿ : ತೆರಿಗೆ ಪಾವತಿದಾರರು ಹಾಗೂ ತೆರಿಗೆ ಅಧಿಕಾರಿಗಳ ನಡುವಣ ಗೊಂದಲ ನಿವಾರಿಸಿ, ಒನ್‍ಟೈಮ್ ಸೆಟಲ್‍ಮೆಂಟ್ ಮಾಡುವ ಮೂಲಕ 80 ಸಾವಿರ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ರಾಜ್ಯಕ್ಕೆ ಸುಮಾರು 15 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ದಾರಿ ಸುಗಮಗೊಳಿಸುವ ನಿಟ್ಟಿನಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ನಿಯಮಗಳಿಗೆ ಎರಡನೆ ತಿದ್ದುಪಡಿ ತರುವ 2024ನೇ ಸಾಲಿನ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಿಧೇಯಕದ ಕುರಿತು ವಿವರಣೆ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ವ್ಯಾಪಾರ ಸ್ನೇಹಿ ಹೆಜ್ಜೆಯ ಭಾಗವಾಗಿ ಸರಕು ಸೇವೆಗಳ ತೆರಿಗೆ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ. ತೆರಿಗೆ ಪಾವತಿದಾರರ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಹಾಗೂ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಸ್ನೇಹಿ ಹೆಜ್ಜೆಯ ಭಾಗವಾಗಿ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲೆಲ್ಲಿ ತೆರಿಗೆದಾರರ ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಗೊಂದಲ ಇದೆ, ಈ ಗೊಂದಲಗಳಿಗೆ ತೆರೆ ಎಳೆಯುವ ಹಾಗೂ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶ. ಕಳೆದ ನಾಲ್ಕು, ಐದು ವರ್ಷಗಳ ಅನುಭವದಲ್ಲಿ ಎಲ್ಲೆಲ್ಲಿ ಕಾನೂನುಗಳ ಅಗತ್ಯ ಇದೆ ಅದನ್ನು ಅನುಭವದ ಆಧಾರದಲ್ಲಿ ಗುರುತಿಸಲಾಗಿದೆ. ಹಾಗೂ ಕೆಲವು ವಿಚಾರಗಳನ್ನು ವ್ಯಾಖ್ಯಾನ ಮಾಡುವಾಗ ಒಂದಕ್ಕೊಂದು ತದ್ವಿರುದ್ಧವಾಗಿದ್ದ ವಿಚಾರಗಳನ್ನು ಸರಳೀಕರಣಗೊಳಿಸುವ ಕೆಲಸ ಈ ತಿದ್ದುಪಡಿಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ತಿದ್ದುಪಡಿಯಿಂದ ಖಜಾನೆಗೆ 15 ಸಾವಿರ ರೂ. ತೆರಿಗೆ ಸಂಗ್ರಹ:
ಸರಕಾರ ಹಾಗೂ ತೆರಿಗೆದಾರರ ನಡುವೆ 80 ಸಾವಿರ ವ್ಯಾಜ್ಯ ಪ್ರಕರಣಗಳು ವಿವಿಧ ಕಾರಣಗಳಿಗಾಗಿ ವಿಲೇವಾರಿಗೆ ಬಾಕಿ ಇರುವ ಕಾರಣದಿಂದ 15 ಸಾವಿರ ಕೋಟಿ ರೂ. ತಕರಾರಿನಲ್ಲಿದೆ. ಈಗಿನ ತಿದ್ದುಪಡಿಯಿಂದ ಎಲ್ಲ ಪ್ರಕರಣಗಳೂ ಇತ್ಯರ್ಥವಾದರೆ ಖಜಾನೆಗೆ 15 ಸಾವಿರ ಕೋಟಿ ರೂ.ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಅಧಿಕಾರಿಗಳ ಹಾಗೂ ತೆರಿಗೆ ಪಾವತಿದಾರರ ನಡುವೆ ಒಪ್ಪಂದ ಆಗದ ಕಾರಣ ಸುಮಾರು 80 ಸಾವಿರ ವ್ಯಾಜ್ಯ ಪ್ರಕರಣ ನ್ಯಾಯಾಲಯಗಳಲ್ಲಿವೆ. ಕಾನೂನು ಪ್ರಕ್ರಿಯೆಯಲ್ಲಿರುವ ಕಾರಣ ಬರುತ್ತಿರುವ ತೆರಿಗೆ ಸಹ ನಿಂತುಹೋಗಿದೆ. ಈ ಹಿಂದೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್ ಪದ್ಧತಿ) ಜಾರಿಯಲ್ಲಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವ ಸಿದ್ದರಾಮಯ್ಯ ವ್ಯಾಟ್ ಬಗೆಗಿನ ವ್ಯಾಜ್ಯಗಳ ಇತ್ಯರ್ಥಕ್ಕೆ ಒನ್ ಟೈಮ್ ಸೆಟಲ್ಮೆಂಟ್‍ಗೆ ಅವಕಾಶ ಕೊಟ್ಟಿದ್ದರು ಎಂದು ಅವರು ಸ್ಮರಿಸಿದರು.
ಈಗಲೂ ಇದೇ ಮಾದರಿಯನ್ನು ಮುಂದುವರೆಸಲು ನಿರ್ಧರಿಸಿ, 80 ಸಾವಿರ ಪ್ರಕರಣಗಳಿಗೆ ಒನ್‍ಟೈಮ್ ಸೆಟಲ್‍ಮೆಂಟ್ ಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈಗಲೇ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡರೆ ಬಡ್ಡಿ ಹಾಗೂ ದಂಡ ಹೊರತುಪಡಿಸಿ ಮೂಲ ಹಣ ಪಾವತಿ ಮಾಡಿದರೆ ಸಾಕು. ಈ ಸೆಟಲ್‍ಮೆಂಟ್‍ಗೆ ಅವಕಾಶ ನೀಡಿದರೆ, ಹಲವರು ಇತ್ಯರ್ಥಕ್ಕೆ ಮುಂದೆ ಬರಬಹುದು. ಇದರಿಂದ ಸರಕಾರದ ಖಜಾನೆಗೆ ಹಣ ಹರಿದುಬರಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ತೆರಿಗೆದಾರರು ಜಿಎಸ್‍ಟಿ ನ್ಯಾಯಾಧೀಕರಣದಲ್ಲಿ ಪ್ರಕರಣ ದಾಖಲಿಸುವಾಗ ಭದ್ರತಾ ಠೇವಣಿ ರೂಪದಲ್ಲಿ 50 ಕೋಟಿ ರೂ. ಠೇವಣಿ ಇಡಬೇಕು. ತೆರಿಗೆದಾರರ ಪಾಲಿಗೆ ಇದು ದೊಡ್ಡ ಹೊರೆ. ಹೀಗಾಗಿ ಈ ಪ್ರಮಾಣವನ್ನು 20 ಕೋಟಿ ರೂ.ಗೆ ಇಳಿಸಬೇಕು ಎಂದು ಹಲವು ವ್ಯವಹಾರಸ್ಥರು ಕೇಳಿಕೊಂಡಿದ್ದರು. ಅದರಂತೆ ಇದೀಗ ಭದ್ರತಾ ಠೇವಣಿ ಹಣವನ್ನು 20 ಕೋಟಿ ರೂ.ಗಳಿಗೆ ಉಳಿಸಲಾಗಿದೆ. ಇಲ್ಲದಿದ್ದರೆ, ತೆರಿಗೆದಾರರು ಸುಪ್ರೀಂ ಕೋರ್ಟ್‍ಗೆ ಹೋಗುತ್ತಾರೆ. ಇದರಿಂದ ಸರಕಾರಕ್ಕೂ ನಷ್ಟ, ತೆರಿಗೆದಾರರಿಗೂ ಕಷ್ಟ ಎಂದು ಅವರು ವಿವರಿಸಿದರು.
ಈ ಕಾನೂನುಗಳನ್ನು ಸರಳೀಕರಿಸುವ ಸಂಬಂಧ ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಬಹುತೇಕ ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಅ.1 ರಿಂದಲೇ ಜಾರಿ ಮಾಡಲು ರಾಜ್ಯಗಳೂ ಸಮ್ಮತಿಸಿವೆ. ಕರ್ನಾಟಕದಲ್ಲಿ ಅದಕ್ಕೂ ಮೊದಲೇ ಜಾರಿಗೆ ತರಲಾಗಿದೆ. ಸಚಿವ ಸಂಪುಟದ ಅನುಮತಿ ಪಡೆದು ರಾಜ್ಯಪಾಲರ ಒಪ್ಪಿಗೆಯೊಂದಿಗೆ ಸುಗ್ರೀವಾಜ್ಞೆ ಮೂಲಕ ಈ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ರಸ್ತುತ ಸದನದಲ್ಲಿ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಮದ್ಯ ಮಾಡಲು ಉಪಯೋಗವಾಗುವ ಸ್ಪಿರಿಟ್‍ಗೆ ತೆರಿಗೆ ವಿಧಿಸುವ ಅಧಿಕಾರದ ನಡುವೆ ರಾಜ್ಯ-ಕೇಂದ್ರ ಸರಕಾರಗಳ ನಡುವೆ ತಕರಾರು ಈ ಹಿಂದಿನಿಂದಲೂ ಇತ್ತು. ಆದರೆ, ಇದೀಗ ಸ್ಪಿರಿಟ್ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದರ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸಬಾರದು ಎಂದು ಜಿಎಸ್‍ಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಸ್ಪಿರಿಟ್ ಅನ್ನು ಜಿಎಸ್‍ಟಿಯಿಂದ ತೆಗೆದು ಹಾಕುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡ ಸದನಕ್ಕೆ ವಿವರಿಸಿದರು.