ಡಿ.26, 27ರಂದು ಬೆಳಗಾವಿಯಲ್ಲಿ ಬೃಹತ್ ‘ಗಾಂಧಿ ಭಾರತ ಕಾರ್ಯಕ್ರಮ’ : ಡಿ.ಕೆ.ಶಿವಕುಮಾರ್
ಬೆಳಗಾವಿ : ಡಿ.26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಇಲ್ಲಿನ ಬೆಳಕವಾಡಿಯ ವೀರಸೌಧದ ಬಳಿ ಮಾಧ್ಯಮಗಳಿಗೆ ‘ಗಾಂಧಿ ಭಾರತ’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಮಹಾತ್ಮಾ ಗಾಂಧಿಜಿ ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಕಾಂಗ್ರೆಸ್ ಅಧ್ಯಕ್ಷತೆಯ ಜವಾಬ್ದಾರಿಯನ್ನು ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ನಾವೆಲ್ಲರೂ ಇದರ ಫಲವನ್ನು ಅನುಭವಿಸುತ್ತಿದ್ದು, ಈ ಶತಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದರು.
ನೂರು ವರ್ಷದ ಈ ಸಂಭ್ರಮವನ್ನು ಸರಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಡಿ ವರ್ಷಪೂರ್ತಿ ಆಚರಣೆಗೆ ಮುಂದಾಗಿದ್ದೇವೆ. ಗಾಂಧಿ ಭಾರತದ ಚಿಹ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದ್ದಾರೆ. ನೂರು ವರ್ಷದ ಹಿಂದೆ ಮಹಾತ್ಮ ಗಾಂಧಿಜಿ ಅಲಂಕರಿಸಿದ ಸ್ಥಾನದಲ್ಲಿ ಈಗ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಇದೇ ತಿಂಗಳು 26 ಹಾಗೂ 27ರಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು. ಗಾಂಧೀಜಿ ಅವರು ಬಂದು ಹೋಗಿದ್ದ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದು ಅವರು ಹೇಳಿದರು.
ಎಲ್ಲೆಲ್ಲಿ ಸಭೆ ಮಾಡಬಹುದು ಎಂದು ಮೂರು ನಾಲ್ಕು ಜಾಗಗಳನ್ನು ನಾವು ಗುರುತಿಸುತ್ತಿದ್ದೇವೆ. ನಾಳೆ(ಡಿ.10) ನಾಡಿದ್ದು ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಈ ಕಾರ್ಯಕ್ರಮಗಳ ರೂಪುರೇಷ ಮಾಡಲು ಸಚಿವ ಎಚ್.ಕೆ.ಪಾಟೀಲ್, ಮಾಜಿ ಸಿಎಂ ಡಾ.ಎಂ.ವೀರಪ್ಪ ಮೋಯ್ಲಿ ಹಾಗೂ ಡಾ.ಬಿ.ಎಲ್.ಶಂಕರ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಗಮಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಬಂದು ಭಾಷಣ ಮಾಡುವ ಆಲೋಚನೆ ಇತ್ತು. ಸಮಯ ಹಾಗೂ ಭದ್ರತೆ ವಿಚಾರಗಳಿವೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದರು.