ಚಿಕ್ಕೋಡಿ | ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಮೊಸಳೆ ದಾಳಿ ; ರೈತ ಮೃತ್ಯು
ಬೆಳಗಾವಿ: ಮೊಸಳೆ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂದ್ಗಂಗಾ ನದಿಯಲ್ಲಿ ನೆಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ.
ಮಹಾದೇವ ಪುನ್ನಪ್ಪ ಖುರೆ ಅವರು ಶುಕ್ರವಾರ (ಮೇ 10) ನದಿ ತೀರದ ಪ್ರದೇಶದಲ್ಲಿನ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದಾಗ, ಮೊಸಳೆ ಅವರ ಕಾಲು ಹಿಡಿದು ನೀರಿನೊಳಗೆ ಎಳೆದೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶನಿವಾರ ರಮೇಶ ಪ್ರಧಾನ ಎಂಬುವವರ ಜಮೀನಿನ ಬಳಿಯ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದ್ದು, ಮೃತರ ಮೃತದೇಹವನ್ನು ಸಾಮಾಜಿಕ ಕಾರ್ಯಕರ್ತ ಸುಕುಮಾರ್ ಉಗಾರೆ ಮತ್ತು ಇತರ ಗ್ರಾಮಸ್ಥರು ನದಿ ದಡದಿಂದ ಹೊರತೆಗೆದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.