ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಪತನ: ಜಗದೀಶ್ ಶೆಟ್ಟರ್
ಬೆಳಗಾವಿ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಪತನವಾಗುವ ಸ್ಥಿತಿ ಇದೆ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರೇ ಬಂಡಾಯ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕ್ಷಣದಲ್ಲಿ ಈ ಕಾಂಗ್ರೆಸ್ ಸರಕಾರ ಪತನವಾಗಬಹುದು. ಈಗಾಗಲೇ ಅವರಿಗೆ ಸೋಲಿನ ಭಯ ಶುರುವಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.
ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಲ್ಲಿನ ಶಾಸಕರಿಗೆ ವಿಶೇಷ ಅನುದಾನ ಕೊಡುತ್ತಿಲ್ಲ. ಹೊಸ ಕೆಲಸಗಳು ಆಗುತ್ತಿಲ್ಲ. ಹಿಂದಿನ ಬಿಲ್ ತುಂಬದ ಸ್ಥಿತಿಯಿದೆ ಎಂದ ಅವರು, ಕೇಸರಿ ಧ್ವಜ ಹಾಕಿದ ತಕ್ಷಣ ಕಾಂಗ್ರೆಸ್ ಸಂಸ್ಕೃತಿ ಎಂದಿಗೂ ಬದಲಾಗುವುದಿಲ್ಲ. ಜನ ನಿಮಗೆ ಮರಳು ಆಗುವುದಿಲ್ಲ ಎಂದು ತಿಳಿಸಿದರು.
ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಭಾಗದ ಜನರ ಪರವಾಗಿ ನಿಂತು ಕೆಲಸ ಮಾಡಿದ್ದೇನೆ. ಹೀಗೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇನೆ. ಸ್ಪೀಕರ್ ಆಗಿದ್ದಾಗ ನಾನು ಸೂಚಿಸಿದ ಸ್ಥಳದಲ್ಲೇ ಸುವರ್ಣ ವಿಧಾನಸೌಧ ನಿರ್ಮಾಣವಾಗಿತ್ತು. ಆ ಬಳಿಕ ನಾನು ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಉದ್ಘಾಟಿಸಿರುವುದು ನನ್ನ ಸೌಭಾಗ್ಯ. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಗಮಿಸಿದ್ದರು ಎಂದರು.