ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ : ಪ್ರಿಯಾಂಕ್ ಖರ್ಗೆ
ಬೆಳಗಾವಿ (ಸುವರ್ಣ ವಿಧಾನಸೌಧ) : ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಮಾಸಿಕ ಗೌರವಧನ ಹೆಚ್ಚಳ ಮಾಡುವ ಕುರಿತ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಡಾ.ಧನಂಜಯ ಸರ್ಜಿ ಹಾಗೂ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಕೇರಳದಲ್ಲಿರುವಂತೆ ಮಾಸಿಕ ಗೌರವ ಧನವನ್ನು ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ, ಹೆಚ್ಚಳ ಮಾಡುವ ಕುರಿತ ಮನವಿಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದರು.
ಗ್ರಾಮ ಪಂಚಾಯತ್ ಸದಸ್ಯರಿಗೆ ಪಿಂಚಣಿ, ಉಚಿತ ಬಸ್‍ಪಾಸ್ ಮತ್ತು ಆರೋಗ್ಯ ವಿಮೆ ನೀಡುವ ಪ್ರಸ್ತಾವನೆ ಸರಕಾರದ ಮುಂದೆ ಇರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾ.ಪಂ.ಸದಸ್ಯರ ಒಕ್ಕೂಟಗಳು ಸಲ್ಲಿಸಿರುವ ಬೇಡಿಕೆಗಳ ಕುರಿತು ಪರಿಶೀಲಿಸಲಾಗಿದೆ. ಅಧಿಕಾರಿ/ ಕೆಲವು ಸಿಬ್ಬಂದಿಗಳ ಸೇವಾ ವಿಷಯ/ ಬೇಡಿಕೆಗಳನ್ನು ಪರಿಶೀಲಿಸಲು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಬೇಡಿಕೆಗಳ ಜಾರಿ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.