ಬಿಜೆಪಿ ನಾಯಕರು ಎಷ್ಟು ಕಪ್ಪ ಕಾಣಿಕೆ ಕೊಟ್ಟರು : ಸಚಿವ ಚಲುವರಾಯಸ್ವಾಮಿ
ಬೆಂಗಳೂರು : ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ ಕೇಂದ್ರದ ನಾಯಕರಿಗೆ ಎಷ್ಟು ಕಪ್ಪಕಾಣಿಕೆ ಕೊಟ್ಟರು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಕ್ಕಾಗಿ ಸಹಜವಾಗಿ ದರ ಹೆಚ್ಚಿಸಲೇಬೇಕು. ಹಾಗಾಗಿ ಯಾವುದೇ ಸರಕಾರಗಳು ಬೆಲೆ ಏರಿಸುತ್ತವೆ. ರೈತರಿಗೆ ನೀಡುವ ಸಬ್ಸಿಡಿ, ಅನುದಾನವೂ ಹೆಚ್ಚುತ್ತದೆ. ಸರಕಾರ ಯಾವುದೇ ತೆರಿಗೆ ವಿಧಿಸದೆ, ಅಭಿವೃದ್ಧಿ ಕೆಲಸ ಕೈಗೊಳ್ಳಲಾಗದು. ಆದರೆ, ಅವೈಜ್ಞಾನಿಕವಾಗಿ ದರ ಹೆಚ್ಚಿಸಿದಾಗ ತಪ್ಪು ಎನ್ನಬಹುದು ಪ್ರಶ್ನಿಸಿ ಎಂದರು.
ರಾಹುಲ್ ಗಾಂಧಿ ಅವರಿಗೆ ಕಪ್ಪಕಾಣಿಕೆ ನೀಡಲು ರಾಜ್ಯದಲ್ಲಿ ಕಾಂಗ್ರೆಸ್‍ನವರು ವಿವಿಧ ವಸ್ತುಗಳ ದರ ಏರಿಸಿದ್ದಾರೆಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪ ಸರಿಯಲ್ಲ. ನಾವು ಅವರಂತೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು
ಈ ಹಿಂದೆ ಕೇಂದ್ರ ಸರಕಾರವೂ ಪೆಟ್ರೋಲ್, ಡೀಸೆಲ್ ದರ ಮತ್ತು ಸೆಸ್ ಹೆಚ್ಚಿಸಿತ್ತು. ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನೂ ಕೊಟ್ಟಿಲ್ಲ. ಇನ್ನೂ ಮಹಾರಾಷ್ಟ್ರ, ತೆಲಂಗಾಣ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಪೆಟ್ರೋಲ್ ದರ ಕಡಿಮೆ ಇದೆ ಎಂದು ಅವರು ವಿವರಿಸಿದರು.