ನಾನು ಮಹಿಳಾ ಕೋಟಾದಿಂದ ಸಚಿವೆಯಾಗಿರುವೆ ಹೊರತು, ಯಾರಿಂದಲೂ ಕಸಿದುಕೊಂಡಿಲ್ಲ: ಮಂಗಳಾ ಅಂಗಡಿಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

Update: 2024-03-31 15:37 GMT

Photo:X/@laxmi_hebbalkar

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೆ ಬಾರಿ ಶಾಸಕಿಯಾಗಿ ಆಯ್ಕೆಯಾದ ನಾನು ಮಹಿಳಾ ಕೋಟಾದಿಂದ ಸಚಿವೆಯಾಗಿರುವೆ ಹೊರತು, ಯಾರಿಂದಲೂ ಕಸಿದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ರವಿವಾರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಮಾಡುವ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್‍ನಲ್ಲಿನ ಹಿರಿಯರಿಂದ ಸಚಿವ ಸ್ಥಾನ ಕಸಿದುಕೊಂಡಿದ್ದಾರೆ ಎಂಬ ಸಂಸದೆ ಮಂಗಳಾ ಅಂಗಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ರಚಿಸುವಾಗ ಮಹಿಳಾ ಕೋಟಾ ಇರುತ್ತೆ. ರೂಪಾ ಶಶಿಧರ್ ಹಾಗೂ ನಾನು ಎರಡನೆ ಬಾರಿಗೆ ಆಯ್ಕೆಯಾದ ಶಾಸಕಿಯರು. ರೂಪಾ ತಂದೆ ಮುನಿಯಪ್ಪನವರು ಸಚಿವರಾದ ಕಾರಣ, ನನಗೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ಸಿಕ್ಕಿದೆ ಎಂದರು.

ಆದರೆ, ಸಂಸದೆ ಮಂಗಳಾ ಅಂಗಡಿಗೆ ಇಂಥ ಸೂಕ್ಷ್ಮವಾದ ವಿಚಾರಗಳು ತಿಳಿದಿಲ್ಲ. ಏಕೆಂದರೆ ಅವರು ತುಂಬಾ ಮುಗ್ಧರು, ಯಾರೋ ಬರೆದುಕೊಟ್ಟ ಹೇಳಿಕೆಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ ಅವರು, ಮಂಗಳಾ ಅಂಗಡಿ ವಯಸ್ಸಿನಲ್ಲಿ ನನಗಿಂತ ದೊಡ್ಡವರಾದರೂ ರಾಜಕೀಯ ಅನುಭವ ಕಡಿಮೆ ಎಂದರು.

ಕಳೆದ ಬಾರಿ ನಾವು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಹೋರಾಟ ಮಾಡಿದಾಗ, ಇದೇ ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೋಕಾಕ್ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಸಿಗುವ ವಿಶ್ವಾಸವಿದೆ. ಅತ್ಯಂತ ಅಚ್ಚರಿಯ ಫಲಿತಾಂಶ ಈ ಕ್ಷೇತ್ರಗಳಲ್ಲಿ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ 6 ಬಾರಿ ಹುಬ್ಬಳ್ಳಿಯಲ್ಲಿ ಗೆದ್ದು, ಇಲ್ಲಿ ಬಂದು ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿದರೆ ಯಾರು ನಂಬುತ್ತಾರೆ. ಮೊದಲು ಶೆಟ್ಟರ್ ಗೆ ತಮ್ಮ ಮನೆ ವಿಳಾಸ ಗೊತ್ತಿದ್ದೆಯೆ? ಎಂದು ಪ್ರಶ್ನಿಸಿದ ಅವರು, ಮಂಗಳಾ ಅಂಗಡಿ ಪಕ್ಷ ಮೊದಲು, ಕುಟುಂಬ ಆಮೇಲೆ ಅಂತ ಹೇಳುತ್ತಿದ್ದಾರೆ. ಹಾಗಾದರೆ ಬೀಗರಿಗೆ ಏಕೆ ಟಿಕೆಟ್ ಕೊಡಿಸಿದರು? ಬೀಗರ ಕುಟುಂಬ ಬಿಟ್ಟು ಬೆಳಗಾವಿಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಯಾರೂ ಇರಲಿಲ್ಲವೇ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News