ಕಾಡಾನೆ ದಾಳಿ ತಡೆಗೆ ಕ್ರಮ | ಆನೆ ಕಾರ್ಯ ಪಡೆ ಹಾಗೂ ಕ್ಷಿಪ್ರ ಸ್ಪಂದನ ತಂಡಗಳ ರಚನೆ : ಈಶ್ವರ್‌ ಖಂಡ್ರೆ

Update: 2024-12-15 17:36 GMT

ಈಶ್ವರ್‌ ಖಂಡ್ರೆ

ಬೆಳಗಾವಿ : ಕಾಡಾನೆಗಳು ಹಿಂಡು ಹಿಂಡಾಗಿ ಜನವಸತಿ ಪ್ರದೇಶಗಳಿಗೆ ಬಂದು ರೈತರ ಬೆಳಗಳನ್ನು ನಾಶ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಯಲು ಆನೆ ಕಾರ್ಯ ಪಡೆ, ಕ್ಷಿಪ್ರ ಸ್ಪಂದನ ತಂಡ ಮತ್ತು ಹಿಮ್ಮೆಟಿಸುವ ಶಿಬಿರ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಅವರು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಶಾಸಕರುಗಳ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಯಲು ಪ್ರತಿ ಜಿಲ್ಲೆಗೆ ಒಂದರಂತೆ ಅಧಿಕಾರಿ ಹಾಗೂ ಸಿಬ್ಬಂದಿನ್ನೊಳಗೊಂಡ 8 ಆನೆ ಕಾರ್ಯಪಡೆ ರಚಿಸಲಾಗಿದೆ. ಇತರೆ ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ತಲಾ 4 ಜನರ ತಂಡದಂತೆ 95 ಹಿಮ್ಮೆಟ್ಟಿಸುವ ತಂಡ ಹಾಗೂ 33 ಕ್ಷಿಪ್ರ ಸ್ಪಂದನೆ ತಂಡಗಳು ರಚಿಸಲಾಗಿದೆ. ಈ ತಂಡಗಳು ರಾತ್ರಿ ಗಸ್ತು ಕಾರ್ಯಕೈಗೊಂಡು ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸಿ, ಆನೆಗಳ ಚಲನ-ವಲನಗಳ ಮಾಹಿತಿಯನ್ನು ನೀಡಿ, ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಂತ್ರಜ್ಞಾನ ಬಳಕೆ:

ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನವಲನಗಳನ್ನು ಗಮನಿಸಲು ‘ಹೆಜ್ಜೆ’ ಎಂಬ ಡ್ಯಾಶ್ ಬೋರ್ಡನ್ನು ಅರಣ್ಯ ಇಲಾಖೆ ರೂಪಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳು ಎಚ್ಚರಿಕೆ ಹಾಗೂ ಮಾಹಿತಿ ನೀಡಲು ಅಡ್ವಾನ್ಸ್ ಅಲರ್ಟ್ ಸಿಸ್ಟಂ ರಚಿಸಲಾಗಿದೆ. ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳನ್ನು ಹಾಗೂ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಆಕಾಶವಾಣಿ ಮುಖಾಂತರ ಹಾಗೂ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ಮಾಹಿತಿ ನೀಡಿದರು.

ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 500 ಕೋಟಿ ರೂ. ಪ್ರಸ್ತಾವ:

ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗದಂತೆ ತಡೆಯಲು ರೈಲ್ವೇ ಹಳಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. 8 ಆನೆಕಾರ್ಯಪಡೆ ರಚಿಸಿ, ಆನೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಆನೆಗಳನ್ನು ಹಿಮ್ಮೆಟ್ಟಿಸಲು ಎಸ್‌ಒಪಿ ರೂಪಿಸಿ, ಅದರನ್ವಯವೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 369 ಕಿ.ಮೀ. ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಿದ್ದು, 60 ಕಿ.ಮೀ. ನಿರ್ಮಾಣ ಪ್ರಗತಿಯಲ್ಲಿದೆ. ಇನ್ನೂ 350 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದ್ದು, ಇದಕ್ಕಾಗಿ 500 ಕೋಟಿ ರೂ. ಗಳ ಬಿಡುಗಡೆಗೆ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಆನೆಗಳ ಚಲನ-ವಲನದ ಬಗ್ಗೆ ಅಧ್ಯಯನ ಕೈಗೊಂಡು ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ವರದಿಯ ಆಧಾರದಲ್ಲಿ ಸರ್ಕಾರ ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸದನಕ್ಕೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಶಾಸಕ ಶಾಸಕ ಹರೀಶ್ ಪೂಂಜಾ ಹೇಳಿಕೆ ದುರದೃಷ್ಟಕರ :

ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನೀಡಿದ ಹೇಳಿಕೆ ದುರದೃಷ್ಟಕರ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News