ಚುನಾವಣೆ ಬಳಿಕ ಬಿಜೆಪಿಯವರಿಗೆ ನೇಹಾ ಯಾರೆಂದೇ ಗೊತ್ತಿರುವುದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Update: 2024-04-21 15:14 GMT

ಬೆಳಗಾವಿ: ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ವಿಚಾರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ನಾಚಿಗೇಡಿತನದ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಜಾಣ ಕುರುಡರು, ಜಾಣ ಕಿವುಡರು. ಅವರು ಬೇಕಾದಾಗ ಮೊಸಳೆ ಕಣ್ಣೀರು ಸುರಿಸ್ತಾರೆ. ಬೇಡವಾದಾಗ ಕಿವುಡತನ ಇದ್ದ ಹಾಗೇ ವರ್ತಿಸುತ್ತಾರೆಂದು ಬಿಜೆಪಿ ನಾಯಕರ ವಿರುದ್ಧ ಸಚಿವರು ಹರಿಹಾಯ್ದರು.

ಬಿಜೆಪಿಯವರು ಈ ಘಟನೆ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಅವರು ಪ್ರತಿಭಟನೆ ಮಾಡಲು ಹೊರಟಿರುವುದು ಚುನಾವಣೆ ಇರುವುದರಿಂದ. ಆದರೆ ಚುನಾವಣೆ ಮುಗಿದ ಮರುಕ್ಷಣವೇ ಅವರಿಗೆ ನೇಹಾ ಯಾರು ಎಂದೇ ಗೊತ್ತಿರುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೇಹಾ ನಮ್ಮ ಸಮಾಜದ ಮಗಳು, ನಮ್ಮ ಮಗಳು ಇದ್ದಹಾಗೆ. ಹತ್ಯೆಯಾದ ತಕ್ಷಣವೇ ಖಂಡನೆ ಮಾಡಿದ್ದೇನೆ. ತಕ್ಷಣವೇ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಬಂದಿದ್ದೇನೆ. ಅವಳು ನಿಮ್ಮ ಮಗಳಷ್ಟೇ ಅಲ್ಲ, ನಮ್ಮ ಸಮಾಜದ ಮಗಳು. ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿ ಸರಕಾರದ ಕಡೆಯಿಂದ ಹೋಗಿ ಸಾಂತ್ವನ ಹೇಳಿ ಕಠಿಣ ಶಬ್ಧಗಳಿಂದ ಘಟನೆಯನ್ನು ಖಂಡಿಸಿದ್ದೇನೆ ಎಂದು ಹೇಳಿದರು.

ಬಿಜೆಪಿಯವರು ಇದರಲ್ಲು ರಾಜಕೀಯ ಮಾಡೋ ಸ್ಥಿತಿ ಬಂದಿದೆ ಎಂದರೆ, ನಾಚಿಕೆಗೇಡು. ದೇಶದಲ್ಲಿ ಇಂತಹ ಪ್ರಕರಣಗಳು ಎಷ್ಟೆಲ್ಲ ಆಗಿವೆ. ಈ ಬಗ್ಗೆ ಅವರ ನಿಲುವೇನು? ಎನ್ನುವುದನ್ನು ಸ್ಪಷ್ಟಪಡಿಸಬೇಕು. ನಮ್ಮ ಮಗಳು ಆಗಬಾರದಿತ್ತು, ಆಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿಯವರು ಬೇಕಾದಾಗ ಮಾತ್ರ ಖಂಡನೆ ಮಾಡೋದೇ?. ಇದಕ್ಕೆಲ್ಲ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News