ಅಂತಿಮ ಘಟ್ಟದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-07-11 15:17 GMT

ಬೆಳಗಾವಿ : ನಮ್ಮ ಇಡೀ ಕುಟುಂಬ ಪಂಚಮಸಾಲಿ ಸಮಾಜ ಮೀಸಲಾತಿ ಹೋರಾಟದಲ್ಲಿ ಇರುತ್ತದೆ. ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುತ್ತೇವೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮಘಟ್ಟ ತಲುಪಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಗುರುವಾರ ಕುವೆಂಪು ನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮಿ ನೇತೃತ್ವದ ನಿಯೋಗ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಶ್ರೀಗಳ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ನಾವು ಬೇರೆ ಸಮಾಜಕ್ಕೆ ಅನ್ಯಾಯ ಮಾಡಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕ, ಸಚಿವರನ್ನು ಒಟ್ಟಿಗೆ ಸೇರಿಸಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ತಾಳ್ಮೆಯಿಂದ ಹೋರಾಡುತ್ತೇವೆ. ಆದರೆ, ನಮ್ಮ ತಾಳ್ಮೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗ ಮೀಸಲಾತಿ ತೆಗೆದುಕೊಂಡಿಲ್ಲ ಎಂದರೆ ಮುಂದೆ ಸಿಗಲು ಸಾಧ್ಯವಿಲ್ಲ. ಈಗ ನಿರ್ಣಾಯಕ ಘಟಕ್ಕೆ ಬಂದು ನಿಂತಿದೆ. ಸಮಾಜದ ಎಲ್ಲ ಬಾಂಧವರು ನನ್ನ ಪರವಾಗಿ ನಿಂತಿರುವುದಕ್ಕೆ ಋಣಿಯಾಗಿದ್ದೇನೆ. ಸಮಾಜದ ಪರ ನಾನು ನನ್ನ ಬದ್ಧತೆ ಉಳಿಸಿಕೊಳ್ಳುವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದರು.

ಸಚಿವರಿಗೆ ಮನವಿ ನೀಡುವುದಕ್ಕೂ ಮುನ್ನ ಮಾತನಾಡಿದ  ಬಸವ ಜಯಮೃತ್ಯುಂಜಯ ಸ್ವಾಮಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಮೊದಲಿನಿಂದಲೂ ಲಕ್ಷ್ಮಿ ಹೆಬ್ಬಾಳ್ಕರ್ ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರಕಾರ 2ಡಿ ಮೀಸಲಾತಿ ಕೊಟ್ಟಿತ್ತು. ಅದು ನಮಗೆ ಬೇಡ. 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರೆಸಿದ್ದೇವೆ ಎಂದರು.

ಸಂಪುಟ ಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಈಶ್ವರ್ ಖಂಡ್ರೆ ಮೀಸಲಾತಿ ಪರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಅಧಿವೇಶನದಲ್ಲೂ ಮಾತನಾಡುವ ವಿಶ್ವಾಸವಿದೆ. ಎಲ್ಲರೂ ಸೇರಿ ಧ್ವನಿ ಎತ್ತಿದರೆ ಮುಖ್ಯಮಂತ್ರಿ ಕ್ರಮಕೈಗೊಳ್ಳುತ್ತಾರೆ. ಇಡೀ ಸಮಾಜವೇ ಅವರ ಜೊತೆಗಿರುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News