ಬೆಳಗಾವಿ ಅಧಿವೇಶನ | ಸಚಿವ ಝಮೀರ್ ವಜಾಕ್ಕೆ ಮುಂದುವರಿದ ವಿಪಕ್ಷ ಪಟ್ಟು: ಸದನದ ಬಾವಿಗಿಳಿದು ಧರಣಿ
ಬೆಳಗಾವಿ, ಡಿ.11: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರುವಂತಹ ಹೇಳಿಕೆ ನೀಡಿರುವ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಅಧಿವೇಶನದಲ್ಲಿಂದು ಪಟ್ಟು ಹಿಡಿದಿವೆ.
6ನೇ ದಿನದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಂದು ಬೆಳಗ್ಗೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಸ್ಪೀಕರ್ ಸ್ಥಾನಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಅಗೌರವ ತೋರಿದ್ದಾರೆ. ಆದ್ದರಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಇದು ಆಡಳಿತ-ವಿಪಕ್ಷದ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಇದು ಗದ್ದಲವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಮುಂದೂಡಿಕೆ ಬಳಿಕ ಸದನ ಆರಂಭಗೊಳ್ಳುತ್ತಿದ್ದಂತೆ ಸಚಿವ ಝಮೀರ್ ವಜಾಕ್ಕೆ ವಿಪಕ್ಷ ಬಿಜೆಪಿ, ಜೆಡಿಎಸ್ ಸದಸ್ಯರು ಪಟ್ಟು ಮುಂದುವರಿಸಿದ್ದು, ವಿಧಾನಸಭೆಯ ಸದನದ ಬಾವಿಗಿಳಿದು ಧರಣಿ ಆರಂಭಸಿದ್ದಾರೆ. ಸದನದ ಬಾವಿಯಲ್ಲಿ ಝಮೀರ್ ವಿರುದ್ಧ ಘೋಷಣೆ ಕೂಗಿದರು.
ಈ ನಡುವೆ ಸ್ಪೀಕರ್ ಯು.ಟಿ.ಖಾದರ್, ರಾಜ್ಯದ ಹೊರಗೆ ನೀಡಿದ ಹೇಳಿಕೆಗೆ ತಾನು ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಪ್ರಶ್ನೋತ್ತರ ಹಾಗೂ ಉತ್ತರ ಕರ್ನಾಟಕ ಮತ್ತು ಬರ ಚರ್ಚೆಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
ಆದರೆ ಇದ್ಯಾವುದಕ್ಕೂ ಜಗ್ಗದ ವಿಪಕ್ಷಗಳು ಧರಣಿಯನ್ನು ಮುಂದುವರಿಸಿದೆ. ವಿಪಕ್ಷ ಧರಣಿಗಳ ನಡುವೆ ಕೆಲವೊಂದು ವಿಧೇಯಕಗಳು ಮಂಡನೆಯಾದವು.