ವಾಲ್ಮೀಕಿ ಹಗರಣ | ಸರಕಾರದ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ : ರಮೇಶ್ ಜಾರಕಿಹೊಳಿ

Update: 2024-07-29 13:15 GMT

ಬೆಳಗಾವಿ : ರಾಜ್ಯ ಸರಕಾರವು ವಾಲ್ಮೀಕಿ ಜನಾಂಗಕ್ಕೆ ಮಾಡಿರುವ ಮೋಸವನ್ನು ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಅನುಮತಿ ಕೇಳಿದ್ದೇನೆ. ನಾನು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಶಾಸಕರು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಸೋಮವಾರ ಗೋಕಾಕ್ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾಗಿಂತಲೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ದೊಡ್ಡದು. ಮುಡಾ ಕುರಿತು ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಆದುದರಿಂದ, ಬಳ್ಳಾರಿಗೆ ಪಾದಯಾತ್ರೆ ಮಾಡೋದು ಒಳ್ಳೆಯದು ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಮೈಸೂರಿಗೆ ಸೀಮಿತಗೊಳಿಸುವುದು ಸರಿಯಲ್ಲ. ರಾಜ್ಯದಲ್ಲಿ ಲಿಂಗಾಯತ, ಮುಸ್ಲಿಮರು, ಎಸ್ಸಿ ಸಮುದಾಯದ ನಂತರ ವಾಲ್ಮೀಕಿ ಸಮುದಾಯದವರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು. ಆ ಜನಾಂಗಕ್ಕೆ ಮೋಸ ಮಾಡಿರುವ ಸರಕಾರದ ವಿರುದ್ಧ ಪಾದಯಾತ್ರೆ ಹಮ್ಮಿಕೊಳ್ಳಬೇಕಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುವು ಅಥವಾ ಕೆಳಗಿಳಿಯುವುದು ಅವರ ಪಕ್ಷದ ಆಂತರಿಕ ವಿಷಯ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು, ಸಿದ್ದರಾಮಯ್ಯ ಮೂಲ ಕಾರಣ. ಆದರೆ, ಕೆಲವರು ಎದೆ ಉಬ್ಬಿಸಿಕೊಂಡು ಈ ಸರಕಾರ ಬರಲು ನನ್ನ ಪಾತ್ರವೂ ಇದೆ ಎನ್ನುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಗಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News