ವಿಧಾನಸೌಧ ಆವರಣದಲ್ಲಿ ಎಸ್.ಎಂ.ಕೃಷ್ಣ ಪುತ್ಥಳಿ ನಿರ್ಮಾಣಕ್ಕೆ ಮನವಿ

Update: 2024-12-10 17:49 GMT

ಎಸ್.ಎಂ.ಕೃಷ್ಣ

ಬೆಳಗಾವಿ(ಸುವರ್ಣ ವಿಧಾನಸೌಧ) : ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮನವಿ ಮಾಡಿದರು.

ಮಂಗಳವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, ಆಲಮಟ್ಟಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿಯೂ ಅವರ ಕೊಡುಗೆ ಅಪಾರವಿದೆ. ಮಹಾರಾಷ್ಟ್ರದಿಂದ ನಿಪ್ಪಾಣಿ ಭಾಗಕ್ಕೆ 3 ಟಿಎಂಸಿ ನೀರು ತರುವ ನಿಟ್ಟಿನಲ್ಲಿ ಎಸ್.ಎಂ.ಕೃಷ್ಣ ಮಾಡಿದ ಪ್ರಯತ್ನ ಶ್ಲಾಘನೀಯವಾದದ್ದು. ಎಸ್.ಎಂ.ಕೃಷ್ಣ ಅವರ ನೆನಪು ಸದಾ ಹಸಿರಾಗಿರಲು ಆಲಮಟ್ಟಿ ಬಳಿ ಅವರ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಇಂದು ನಾನು ಈ ಸದನದ ಸದಸ್ಯನಾಗಿ ಇರುವುದಕ್ಕೆ ಎಸ್.ಎಂ.ಕೃಷ್ಣ ಅವರು ಕಾರಣಕರ್ತರು ಎಂದರೇ ತಪ್ಪಾಗಲಾರದು. 2004ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಚುನಾಯಿತರಾಗಿದ್ದ ಅವರು, ನಂತರ ರಾಜ್ಯಪಾಲರಾಗಿ ನೇಮಕಗೊಂಡಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದರು.

ಆಗ ಚಾಮರಾಜಪೇಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದೆ. ಆಗ ನನ್ನನ್ನು ಎಸ್.ಎಂ.ಕೃಷ್ಣ ಅಭಿನಂದಿಸಿದ್ದರು. ಯುವಕರಿಗೆ ಅವರ ಶಿಸ್ತಿನ ಜೀವನ ಮಾದರಿಯಾದದ್ದು. ತಮ್ಮ ಮಾತು, ನಡೆ, ನುಡಿ, ಧಿರಿಸುಗಳ ಮೂಲಕ ಅವರು ಎಲ್ಲರನ್ನೂ ಆಕರ್ಷಿಸುತ್ತಿದ್ದರು. ನನ್ನ ತಂದೆಯ ಕಾಲದಿಂದಲೂ ಎಸ್.ಎಂ.ಕೃಷ್ಣ ಅವರೊಂದಿಗೆ ನಮ್ಮ ಒಡನಾಟವಿತ್ತು ಎಂದು ಅವರು ಹೇಳಿದರು.

ಕಾಂಗ್ರೆಸ್ ಸದಸ್ಯ ಟಿ.ಬಿ.ಜಯಚಂದ್ರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಎಸ್.ನಿಜಲಿಂಗಪ್ಪ ಅವರೊಂದಿಗೆ ಎಸ್.ಎಂ.ಕೃಷ್ಣ ಅವರು ಕಾರಣಕರ್ತರು. ಇಂದು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನದಿ ನೀರು ಬಂದಿದೆ ಅಂದರೆ ಅದಕ್ಕೆ ಎಸ್.ಎಂ.ಕೃಷ್ಣ ಜಾರಿಗೆ ತಂದ ರಾಜ್ಯ ಜಲ ನೀತಿ ಕಾರಣ ಎಂದು ಸ್ಮರಿಸಿದರು.

ಪಕ್ಷೇತರ ಸದಸ್ಯ ಜಿ.ಜನಾರ್ದನ ರೆಡ್ಡಿ ಮಾತನಾಡಿ, ಬೆಂಗಳೂರಿನ ಮುಂದಿನ 30 ವರ್ಷಗಳ ಮೂಲಸೌಕರ್ಯಗಳು ಹೇಗಿರಬೇಕು ಎಂಬುದರ ಕುರಿತು ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿಯಲ್ಲೆ ಯೋಜಿಸಿದ್ದರು. ಬೆಂಗಳೂರಿನ ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲು ಮೂಲ ಕಾರಣ ಎಸ್.ಎಂ.ಕೃಷ್ಣ. ಅವರ ದೂರದೃಷ್ಟಿ ಪ್ರತಿಯೊಬ್ಬರಿಗೂ ಮಾದರಿಯಾದದ್ದು ಎಂದು ಹೇಳಿದರು.

ಬೆಂಗಳೂರಿನ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಕೊಡುಗೆ ಅವಿಸ್ಮರಣೀಯವಾದದ್ದು. ಆದುದರಿಂದ, ರಾಜ್ಯ ಸರಕಾರವು ಬೆಂಗಳೂರಿನ ಯಾವುದಾದರೂ ಒಂದು ಭಾಗದಲ್ಲಿ ಅಥವಾ ವಿಮಾನ ನಿಲ್ದಾಣದ ಬಳಿ ಎಸ್.ಎಂ.ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸದಸ್ಯ ಅಪ್ಪಾಜಿ ನಾಡಗೌಡ, ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರರು ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News