ಸರಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರು, ಹಸುಗೂಸುಗಳ ಸಾವು : ವಿಜಯೇಂದ್ರ

Update: 2024-12-09 10:56 GMT

ಬೆಳಗಾವಿ : ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನಲ್ಲಿ ರಾಜ್ಯ ಸರಕಾರದ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಸೋಮವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಸಾವು ಪ್ರಕರಣ ಸಂಬಂಧ ಸತ್ಯಾಂಶ ತಿಳಿಯಲು ಇಲ್ಲಿ ಬಂದಿದ್ದೇವೆ. ಆಸ್ಪತ್ರೆ ಭೇಟಿಯಲ್ಲಿ ರಾಜಕಾರಣದ ಪ್ರಶ್ನೆ ಇಲ್ಲ.  ಬಡವರಿಗೆ ಅನ್ಯಾಯ ಆಗುತ್ತಿದೆ. ಬಾಣಂತಿಯರು, ಹಸುಗೂಸುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಸದನದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಈ ಸಾವುಗಳ ಕುರಿತು ತಲೆ ಕೆಡಿಸಿಕೊಂಡಿಲ್ಲ. ಈ ಬೇಜವಾಬ್ದಾರಿತನ ಏನಿದೆಯೋ ಅದನ್ನು ಸರಕಾರ ಈಗಲಾದರೂ ಎಚ್ಚತ್ತು ಗಮನಿಸಬೇಕು ಎಂಬ ದೃಷ್ಟಿಯಿಂದ ಇದರ ಕುರಿತು ಗಮನ ಸೆಳೆಯುತ್ತೇವೆ ಎಂದು ತಿಳಿಸಿದರು.

ಆಸ್ಪತ್ರೆಗಳು ಶವಾಗಾರವಾಗುವ ಸ್ಥಿತಿ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನ ವಿಷಯದಲ್ಲಿ ರಾಜ್ಯಾದ್ಯಂತ ಗೊಂದಲದ ವಾತಾವರಣ ಇದೆ. ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರವೇ ಇಂತಹ ಪರಿಸ್ಥಿತಿಗೆ ಕಾರಣ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುವ ಕಡೆ ಗಮನ ಕೊಡುತ್ತಿದ್ದು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ. ಔಷಧಿ ಕೊಂಡುಕೊಳ್ಳುವಾಗ ಬ್ಲಾಕ್ ಮಾಡಿದ ಕಳಪೆ ಔಷಧಿಗಳನ್ನು ಖರೀದಿಸಿ ಬಳಸಿದ್ದರಿಂದ ಅನೇಕ ಕಡೆ ಇಂತಹ ದಾರುಣ ಘಟನೆಗಳು ನಡೆದಿವೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News