ಬಸವಲಿಂಗ ಪಟ್ಟದೇವರು, ಡಾ.ತೇಜಸ್ವಿ ಕಟ್ಟಿಮನಿ, ಡಾ.ಶರ್ಮಾಗೆ ಹಂಪಿ ವಿವಿಯ ‘ನಾಡೋಜ’ ಗೌರವ
ಹೊಸಪೇಟೆ: ಹಂಪಿ ಕನ್ನಡ ವಿಶ್ವ ವಿದ್ಯಾಲಯ ನೀಡುವ ಪ್ರತಿಷ್ಟಿತ ‘ನಾಡೋಜ’ ಪದವಿಗೆ ಬೀದರ್ ನ ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಸಾಹಿತಿ ಡಾ.ತೇಜಸ್ವಿ ಕಟ್ಟಿಮನಿ ಹಾಗೂ ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಸಿ.ಶರ್ಮಾ ಭಾಜನರಾಗಿದ್ದಾರೆ.
ಶುಕ್ರವಾರ ಹಂಪಿ ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕನ್ನಡ ವಿವಿಯ ನವರಂಗ ಬಯಲು ಮಂದಿರದಲ್ಲಿ ಜ.10ರ ಸಂಜೆ 5.30ಕ್ಕೆ ನಡೆಯಲಿರುವ 32ನೆ ‘ನುಡಿಹಬ್ಬ ಘಟಿಕೋತ್ಸವ’ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಡಿ.ಲಿಟ್ ಹಾಗೂ 264 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಿಎಚ್‍ಡಿ ಪದವಿಯನ್ನು ಪ್ರದಾನ ಮಾಡಲಿದ್ದಾರೆ. ಅನಂತಪುರದ ಆಂಧ್ರಪ್ರದೇಶದ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಕೋರಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪರಮಶಿವಮೂರ್ತಿ ತಿಳಿಸಿದರು.
ಭಾಷೆ ನಿಕಾಯದಲ್ಲಿ 100 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ನಿಕಾಯದಲ್ಲಿ 160 ವಿದ್ಯಾರ್ಥಿಗಳು ಹಾಗೂ ಲಲಿತಕಲೆಗಳ ನಿಕಾಯದಲ್ಲಿ 4 ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದಾರೆ. ಅತಿ ಕಡಿಮೆ ಸಂಖ್ಯೆಯಿರುವ ಕೇರಳದ ಪಣಿಯನ್ ಬುಡಕಟ್ಟು ಸಮುದಾಯದ ಕುರಿತು ಸಂಶೋಧನೆಯನ್ನು ಅದೇ ಸಮುದಾಯದ ವಿದ್ಯಾರ್ಥಿನಿ ದಿವ್ಯಾ ಅವರು ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪಿಎಚ್‍ಡಿ ಪಡೆಯಲಿದ್ದು, ಇದು ಕನ್ನಡ ವಿಶ್ವ ವಿದ್ಯಾಲಯಕ್ಕೂ ಮತ್ತು ಪಣಿಯನ್ ಸಮುದಾಯಕ್ಕೂ ಹೆಮ್ಮೆಯ ವಿಷಯ ಎಂದು ನುಡಿದರು.
ಘಟಿಕೋತ್ಸವ ಮುನ್ನ ದಿನವಾದ ಜ.9ರಂದು ಮಂಟಪ ಸಭಾಂಗಣದಲ್ಲಿ ಪ್ರಸಾರಂಗದಿಂದ ಪ್ರಕಟಣೆಗೊಂಡ 51 ಪುಸ್ತಕಗಳನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ಲಕ್ಷ್ಮಣ ತೆಲಗಾವಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕುಲಸಚಿವ ಡಾ.ವಿಜಯಪೂಣಚ್ಚ ತಂಬಂಡ, ಡೀನ್‍ರಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚಲುವರಾಜ, ಡಾ. ಶಿವಾನಂದ ವಿರಕ್ತಮಠ, ಡಾ.ಶೈಲಜಾ ಹಿರೇಮಠ, ಹಣಕಾಸು ಅಧಿಕಾರಿ ಡಾ.ದಿನೇಶ್ ಕೆ., ಅಧ್ಯಯನಾಂಗ ನಿರ್ದೇಶಕ ಡಾ.ಪಿ.ಮಹಾದೇವಪ್ಪ, ಮಾಹಿತಿ ಕೇಂದ್ರ ನಿರ್ದೇಶಕಿ ಡಿ. ಮೀನಾಕ್ಷಿ ಈ ವೇಳೆ ಹಾಜರಿದ್ದರು.