ಹಣ ಬಲ, ತೋಳ್ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ, ಎಚ್ಚರ: ಸಿದ್ದರಾಮಯ್ಯ

Update: 2024-11-08 10:06 GMT

ಸಂಡೂರು, ನ 8: ಹಣ ಬಲ, ತೋಳು ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ ಎಚ್ಚರ. ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಾನು ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡುವುದಕ್ಕೆ ಜಾಗ ಕೊಡದೆ ಅವಮಾನ ಮಾಡಿದ್ರು. ದೇವಸ್ಥಾನದ ಬಾಗಿಲಲ್ಲಿ ಒಬ್ನೇ ನಿಂತು ಭಾಷಣ ಮಾಡಿ ಹೋಗಿದ್ದೆ. ಒಂದು ಮನೆಗೆ ಹೋಗಿ ಕುಡಿಯುವುದಕ್ಕೆ ನೀರು ಕೇಳಿದ್ರೂ ನನಗೆ ನೀರು ಕೊಡೋಕೂ ಜನ ಭಯ ಬೀಳ್ತಿದ್ರು ಎಂದು ಸಿದ್ದರಾಮಯ್ಯ ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ, ರೆಡ್ಡಿ ಬ್ರದರ್ಸ್ ಬಳ್ಳಾರಿಯನ್ನು ಹಾಳು ಮಾಡಲು ಬಿಡಬಾರದು ಎಂದು ನಾನು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದೆ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಕಾಂಗ್ರೆಸ್ ಎಂದು ಸಿದ್ದರಾಯ್ಯ ತಿಳಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಜಿಂದಾಲ್ ಗೆ ಕಾಲಿಟ್ಟರೂ ಜಿಲ್ಲಾ ಮಟ್ಟದ ಅಧಿಕಾರಿಗಳೂ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕಾಣಲು ಬರಲಿಲ್ಲ. ಆ ಮಟ್ಟದಲ್ಲಿ ಅಧಿಕಾರಿಗಳಲ್ಲಿ ಭಯ, ಭೀತಿ ಸೃಷ್ಟಿ ಮಾಡಿದ್ದರು. ನಾನು ಮತ್ತು ಸಿಎಂ ಇಬ್ರಾಹಿಂ ಚುನಾವಣಾ ಪ್ರಚಾರಕ್ಕೆ ಬಂದರೆ ಕಾರ್ಯಕ್ರಮ ಮಾಡಲು, ನನಗೆ ಭಾಷಣ ಮಾಡಲು ಜಾಗ ಕೊಡಲಿಲ್ಲ. ದೇವಸ್ಥಾನದ ಬಾಗಿಲಲ್ಲಿ ನಾನು ಭಾಷಣ ಮಾಡಿ ಹೋದೆ. ಮತ್ತೆ ಏನಾದರೂ ಜನಾರ್ದನ ರೆಡ್ಡಿ ಪಟಾಲಂ ಬಳ್ಳಾರಿಯಲ್ಲಿ ಬೆಳೆದರೆ ಮತ್ತೆ ಅದೇ ಭೀತಿ, ಭಯದಲ್ಲಿ ಬಳ್ಳಾರಿ ನರಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ. ಬಿಜೆಪಿಯನ್ನು ಸೋಲಿಸಿ ಬಳ್ಳಾರಿಯನ್ನು ಉಳಿಸಿ ಎಂದು ಕರೆ ನೀಡಿದರು.

ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲಿನಿಕ್ ಗಳು ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲವೂ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಬಿಜೆಪಿ ಅವಧಿಯಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಹೈದ್ರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿ ಮಾಡಿದ್ದು ಕಾಂಗ್ರೆಸ್ . ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ , ಧರಂಸಿಂಗ್ ಮತ್ತು ನಾನು ಸೇರಿ 371 ಜೆ ಜಾರಿ ಮಾಡಲು ಕಾರಣ. ಬಳಿಕ ನಾನು ಮುಖ್ಯಮಂತದರಿಯಾಗಿ 5000 ಕೋಟಿ ರೂ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಿದೆ. 371 ಜೆ ಬಂದಿದ್ದರಿಂದ ಇಲ್ಲಿನ ಮಕ್ಕಳು ಎಂಜಿನಿಯರ್ ಗಳಾದರು. ಡಾಕ್ಟರ್ ಗಳಾದರು. ಸರ್ಕಾರಿ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಲು ಅವಕಾಶವಾಯಿತು. ಈಗ ಅವರು ಅಕ್ರಮ ಗಣಿಗಾರಿಕೆಯ ಹಣದ ಚೀಲಗಳನ್ನು ಹೊತ್ತುಕೊಂಡು ಬಂದು ಕುಳಿತಿದ್ದಾರೆ. ಅವರ ಹಣಕ್ಕೆ ಮರುಳಾಗುತ್ತೀರಾ ? ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆದ ಕಾಂಗ್ರೆಸ್ ಕೈ ಹಿಡಿಯುತ್ತೀರಾ ಪ್ರಾಮಾಣಿಕವಾಗಿ ಯೋಚಿಸಿ ನಿರ್ಧರಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದು, ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿ ವರ್ಷಕ್ಕೆ 56 ಸಾವಿರ ಕೋಟಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಾಕ್ತಾ ಇರುವುದು ನಮ್ಮ ಸರ್ಕಾರ. ಆದ್ದರಿಂದ ನಿಮ್ಮ ಬದುಕಿಗೆ ಪ್ರತೀ ತಿಂಗಳು ಬೆಳಕು ನೀಡುವ ನಮಗೆ ಬೆಂಬಲಿಸಬೇಕೋ, ಚುನಾವಣೆ ಬಂದಾಗ ಮಾತ್ರ ಕೊಡುವ ಅಕ್ರಮ ಗಣಿಗಾರಿಕೆಯ ಹಣಕ್ಕೆ ಓಟು ಹಾಕಿದ್ರೆ ಅದು ಅನ್ಯಾಯ ಆಗಲ್ವಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು ಅನ್ನಪೂರ್ಣ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.

ನಾವಿನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿ ಇರ್ತೀವಿ. ಅಲ್ಲಿಯವರೆಗೂ ನಾವು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರಿಸ್ತೀವಿ. ಬಿಜೆಪಿ ಅಪಪ್ರಚಾರವನ್ನು ನಂಬಬೇಡಿ. ಸುಳ್ಳುಗಳಿಗೆ ಮೋಸ ಹೋಗಬೇಡಿ. ಹೃದಯದ ಮಾತು ಕೇಳಿ ಅಭಿವೃದ್ಧಿಗೆ ನಿಮ್ಮ ಮತ ನೀಡಿ ಎಂದು ಸಿದ್ದರಾಮಯ್ಯ ಕೋರಿದರು.

ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಅನ್ನಪೂರ್ಣಮ್ಮ ಅವರಿಗೆ ಬೀಳುವ ಪ್ರತೀ ಓಟು ನನಗೆ ಹಾಕಿದಂತೆ, ಸಂತೋಷ್ ಲಾಡ್ ಅವರಿಗೆ ಹಾಕಿದಂತೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News