ಸಣ್ಣ ತಪ್ಪೂ ಮಾಡದ ನನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಬಿಜೆಪಿ ಷಡ್ಯಂತ್ರ : ಸಿಎಂ ಸಿದ್ದರಾಮಯ್ಯ

Update: 2024-11-07 12:45 GMT

ಸಿದ್ದರಾಮಯ್ಯ

ಸಂಡೂರು : ಸಣ್ಣ ತಪ್ಪು ಕೂಡ ಮಾಡದ ನನಗೆ ಕಳಂಕ ತರಲು ಬಿಜೆಪಿ ಸುಳ್ಳು ಕೇಸು ಹಾಕಿಸಿ ಷಡ್ಯಂತ್ರ ಮಾಡಿದೆ. ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಡಲು ಸಂಡೂರಿನಲ್ಲಿ ಅನ್ನಪೂರ್ಣಮ್ಮ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.

ಗುರುವಾರ ಸಂಡೂರು ವಿಧಾನಸಭಾ ಕ್ಷೇತ್ರದ ಯಶವಂತಪುರ ಗ್ರಾಮದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.

ಯಶವಂತಪುರದ ಪುತ್ರ ಈ.ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ. ಈ.ತುಕಾರಾಮ್ ಅಭಿವೃದ್ಧಿಯಲ್ಲಿ ನಿಸ್ಸೀಮ. ನನ್ನಿಂದ, ಎಲ್ಲಾ ಮಂತ್ರಿಗಳಿಂದ ಸಜ್ಜನಿಕೆಯಿಂದಲೇ ಕೆಲಸ ಮಾಡಿಸಿಕೊಳ್ಳುವ ಕಲೆ, ಕಾಳಜಿ ಈ.ತುಕಾರಾಮ್ ಅವರಿಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈಗ ಅನ್ನಪೂರ್ಣಮ್ಮ ಅವರನ್ನೂ ಸೇರಿಸಿಕೊಂಡು ಅಭಿವೃದ್ಧಿ ಹೆಚ್ಚಾಗಿ ಆಗುತ್ತದೆ. ನಮ್ಮ ಸರಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತವಾದ ಶಕ್ತಿ, ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ಯಶಸ್ವಿಯಾಗಿ ನಮ್ಮ ಗ್ಯಾರಂಟಿಗಳು ನಡೆಯುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು.

ನಾವು ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 15 ಪೈಸೆ ಮಾತ್ರ. ಐದನೇ ವೇತನ ಆಯೋಗ, ತುಂಗಾ ಮೇಲ್ದಂಡೆ, ಬರ ಪರಿಹಾರದಲ್ಲೂ ರಾಜ್ಯಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ನಾವು ಸುಪ್ರೀಂಕೋರ್ಟ್‍ಗೆ ಹೋಗಿ ಬರ ಪರಿಹಾರ ತಂದೆವು. ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ನಿಲ್ಲಿಸಿದರೆ ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡುತ್ತಾರೆಂದು ಕೇಂದ್ರ ತೊಂದರೆ ಕೊಡುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು.

ನಾವು 56 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ. ಕಾಂಗ್ರೆಸ್ಸಿಗೆ ಮತ ನೀಡಿ. ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಲೇಬೇಕು. ಈ.ತುಕಾರಾಮ್ ಅವರ ಖಾಲಿ ಜಾಗವನ್ನು ಅನ್ನಪೂರ್ಣಮ್ಮ ಭರ್ತಿ ಮಾಡಬೇಕು ಎಂದು ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದರು.

ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ. ನಾನು ಮಂತ್ರಿಯಾಗಿ 40 ವರ್ಷ ಆಯಿತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೆ, ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News