ಹೆಣದ ಮೇಲೆ ಹಣ ಮಾಡಿದ ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಜನ ಭಯದಲ್ಲಿ ಬದುಕು ಸಾಗಿಸುತ್ತಿದ್ದರು : ಡಿ.ಕೆ. ಶಿವಕುಮಾರ್

Update: 2024-11-05 12:39 GMT

 ಡಿ.ಕೆ. ಶಿವಕುಮಾರ್

ಸಂಡೂರು : "ಬಿಜೆಪಿ ಸರಕಾರ ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಲೂಟಿ ಮಾಡಿತ್ತು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇಡೀ ಬಳ್ಳಾರಿ ಜಿಲ್ಲೆಯ ಜನ ಭಯದಿಂದ ಜೀವನ ಮಾಡುತ್ತಿದ್ದರು. ಈಗ ಜಿಲ್ಲೆಯ ಜನ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರ ಡಿ.ಕೆ.ಶಿವಕುಮಾರ್ ಅವರು ತಿಮಲಾಪುರ, ಎಳುಬೆಂಜಿಯಲ್ಲಿ ಮಂಗಳವಾರ ಪ್ರಚಾರ ನಡೆಸಿ ಮಾತನಾಡಿದ ಅವರು, "ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹೇಗಿತ್ತು ಎಂದು ನೀವು ನೋಡಿದ್ದೀರಿ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಹೊಡೆದರು. ಕೋವಿಡ್ ಸಮಯದಲ್ಲಿ ಯಾವುದೇ ಸಮುದಾಯಕ್ಕೆ ಬಿಜೆಪಿ ಸರಕಾರ ನೆರವು ನೀಡಲಿಲ್ಲ. ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ನಿಮಗೆ ಯಾವುದಾದರೂ ಬಂದಿದೆಯಾ? ಬಡವರಿಗೆ ಸಹಾಯ ಮಾಡದಿದ್ದರೆ ಅಂತಹ ಸರ್ಕಾರ ಯಾಕೆ ಬೇಕು. ಕೋವಿಡ್ ಅಕ್ರಮದ ವರದಿ ಬಂದಿದೆ. ಅದನ್ನು ನೋಡಿ ನನಗೆ ಕೋವಿಡ್ ಬಂದಷ್ಟು ಭಯವಾಗಿದೆ ಎಂದು ಹೇಳಿದರು.

ಸಂಡೂರು ನೆಮ್ಮದಿಯಿಂದ ಬದುಕುವ ಕ್ಷೇತ್ರ :

ಈ ಹಿಂದೆ ಬಳ್ಳಾರಿ ಜನ ಭಯದಿಂದ ಬದುಕು ನಡೆಸುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಅವರು ಬಂದರೆ ಅಧಿಕಾರಿಗಳ ಭೇಟಿಗೂ ಅವಕಾಶ ನೀಡುತ್ತಿರಲಿಲ್ಲ. ಆಗ ನಾನು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ಮಾಡಿದೆವು. ನಾನು ಕೂಡ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದೆ. ನಿಮ್ಮ ಊರನ್ನು ನ್ಯೂಯಾರ್ಕ್ ಬೀಜಿಂಗ್ ಮಾಡುತ್ತೇವೆ ಎಂದು ನಾನು ಹೇಳುವುದಿಲ್ಲ. ನೀವು ನೆಮ್ಮದಿಯ ಬದುಕು ಸಾಗಿಸಬೇಕು. ಅದು ನಮ್ಮ ಗುರಿ. ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರನ್ನು ನೆಮ್ಮದಿಯಾಗಿ ಬದುಕು ನಡೆಸುವ ಕ್ಷೇತ್ರವನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.

ನನ್ನ ಕ್ಷೇತ್ರಕ್ಕಿಂತ ಸಂಡೂರಿನಲ್ಲಿ ತುಕಾರಾಂ ಹೆಚ್ಚಿನ ಕೆಲಸ :

"ನಾನು ಕನಕಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಗಿಂತ ಹೆಚ್ಚು ಕೆಲಸವನ್ನು ತುಕಾರಾಂ ಅವರು ಸಂಡೂರು ಕ್ಷೇತ್ರದಲ್ಲಿ ಮಾಡಿ, ಇಲ್ಲಿನ ಜನರ ಮನ ಗೆದ್ದಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.

"ಚುನಾವಣೆ ಪ್ರಕಟವಾಗುವ ಮುನ್ನ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರಿಗೆ ಬಂದು ಅನೇಕ ಅಭಿವೃದ್ಧಿ ಕೆಲಸಗಳ ಬಗ್ಗೆ ಘೋಷಣೆ ಮಾಡಿದ್ದೆವು. ಇಲ್ಲಿನ ಅಭಿವೃದ್ಧಿ ಕೆಲಸ ನೋಡಿದಾಗ ನಾನು ಕನಕಪುರದಲ್ಲಿ ಮಾಡಿರುವ ಕೆಲಸಕ್ಕಿಂತ ಹೆಚ್ಚು ಕೆಲಸ ಇಲ್ಲಿ ಆಗಿದೆ. 200 ಹಾಸಿಗೆಗಳ ಆಸ್ಪತ್ರೆ, 35 ಕೋಟಿ ರೂ. ಮೊತ್ತದ ತಾಲೂಕು ಕಚೇರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಣ್ಣ ಪುಟ್ಟ ಹಳ್ಳಿಯಲ್ಲೂ ಕಾಂಕ್ರೀಟ್ ರಸ್ತೆ ಹಾಕಿಸಿದ್ದಾರೆ ಎಂದು ತಿಳಿಸಿದರು.

ತುಕಾರಾಂ ಸೋಲಿಲ್ಲದ ಸರದಾರ :

ಸಂಡೂರಿನಲ್ಲಿ ನಿಮ್ಮ ಶಾಸಕರು ಸೋಲಿಲ್ಲದ ಸರದಾರ. ನಾವು ಅವರನ್ನು ಸಂಸತ್ತಿಗೆ ಕಳುಹಿಸಲು ತೀರ್ಮಾನಿಸಿದೆವು. ಅವರಿಗೆ ಈ ಕ್ಷೇತ್ರ ಬಿಟ್ಟುಹೋಗಲು ಇಷ್ಟವಿಲ್ಲ. ಅವರು ಈ ಕ್ಷೇತ್ರದಲ್ಲೇ ಇರಬೇಕು ಎಂದು ಬಯಸಿದ್ದರು. ಆದರೂ ನಾನೂ, ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಚರ್ಚೆ ಮಾಡಿ ಸಂಸತ್ತಿಗೆ ಕಳುಹಿಸಿದ್ದೇವೆ. ನೀವು ಸತತವಾಗಿ ನಾಲ್ಕು ಬಾರಿ ಅವರನ್ನು ಆರಿಸಿ ಗೆಲ್ಲಿಸಿದ್ದೀರಿ. ಅವರ ಸ್ಥಾನಕ್ಕೆ ಸಹೋದರಿ ಅನ್ನಪೂರ್ಣ ಅವರನ್ನು ನಿಲ್ಲಿಸಿದ್ದೇವೆ. ನಾವು ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳುವಂತಿಲ್ಲ. ಅವರದ್ದು ದೊಡ್ಡ ಇತಿಹಾಸವೇ ಇದೆ. ಅವರ ಆಚಾರ ವಿಚಾರ ಕೇಳಿ ನನಗೆ ಭಯವಾಗಿದೆ. ಜನಾರ್ದನ ರೆಡ್ಡಿ ಅವರು ಕರೆದುಕೊಂಡು ಬಂದವರನ್ನು ನಿಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ಅವರ ಆಡಳಿತದಲ್ಲಿ ನಿಮ್ಮ ಹಾಗೂ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಏನಾಯ್ತು ಎಂದು ನಿಮಗೆ ಗೊತ್ತಿದೆ. ನೀವೆಲ್ಲಾರೂ ವಿದ್ಯಾವಂತರು, ಬುದ್ಧಿವಂತರು ಹಾಗೂ ಪ್ರಜ್ಞಾವಂತರಿದ್ದೀರಿ. ಈ ಹಿಂದೆ ಜಿಲ್ಲೆ ಹಾಗೂ ರಾಜ್ಯಕ್ಕೆ ಯಾವ ಪರಿಸ್ಥಿತಿ ಬಂದಿತ್ತು ಎಂದು ನಿಮಗೆ ಅರ್ಥವಾಗಿದೆ. ಸಂಡೂರಿನ ಜನತೆ ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

371ಜೆ ಮೂಲಕ ನಿಮ್ಮ ಬದುಕು ಬದಲಾಗಿದೆ :

ಇನ್ನು ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಮೂಲಕ ವಿಶೇಷ ಸ್ಥಾನಮಾನ ನೀಡಿ, ನಿಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಈ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದೆ ಇಟ್ಟಾಗ, ಇದು ಸಾಧ್ಯವಿಲ್ಲ ಎಂದು ಲಾಲ್ ಕೃಷ್ಣ ಆಡ್ವಾಣಿ ಅವರು ಹೇಳಿದರು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಖರ್ಗೆಯವರು ಸೋನಿಯಾ ಗಾಂಧಿ ಹಾಗೂ ಇತರೆ ಮೈತ್ರಿ ಪಕ್ಷಗಳ ನಾಯಕರನ್ನು ಒಪ್ಪಿಸಿ ನಿಮಗೆ 371 ಜೆ ಜಾರಿಗೊಳಿಸಿ ನಿಮಗೆ ಶಕ್ತಿ ತುಂಬಿದರು. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕೊಡಿಸಿ, ಈ ಭಾಗದ ಯುವಕರ ಭವಿಷ್ಯ ಉಜ್ವಲಗೊಳಿಸಿದರು.

ತುಕಾರಾಂ ಅವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡು ನಿಮ್ಮ ಹೃದಯ ಗೆದ್ದಿದ್ದಾರೆ ಇದು ನನಗೆ ಬಹಳ ಸಂತೋಷವಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಕ್ತಿ :

ಬಿಜೆಪಿ ಸರಕಾರದ ದುರಾಡಳಿತದಿಂದ ನೀವು ಕಷ್ಟಕ್ಕೆ ಸಿಲುಕಿದಾಗ, ನಿಮ್ಮ ಬದುಕು ಬದಲಾವಣೆ ಮಾಡಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ನಿಮ್ಮ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿವೆ. ಈ ಯೋಜನೆಗಳಿಂದ ಬಡವರು ಪ್ರತಿ ತಿಂಗಳು ಸುಮಾರು 5 ಸಾವಿರ ರೂ. ಉಳಿತಾಯವಾಗುವಂತೆ ಮಾಡಿದ್ದೇವೆ. ರಾಜ್ಯದಲ್ಲಿ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದರು.

ಇನ್ನು ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ, ನರೇಗಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಯಡಿಯೂರಪ್ಪ, ಅವರ ಮಗ, ಅಶೋಕಣ್ಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ನಾವು ಚುನಾವಣೆಗಾಗಿ ಈ ಯೋಜನೆ ಜಾರಿ ಮಾಡಿಲ್ಲ. ನಿಮ್ಮ ಬದುಕು ಸುಧಾರಿಸುವುದು ನಮ್ಮ ಗುರಿ. ನಾವು ಭಾವನೆಯ ಮೇಲೆ ರಾಜಕಾರಣ ಮಾಡುತ್ತಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ನಾಗೇಂದ್ರ ಅವರಿಗೆ ಬಿಜೆಪಿಯವರು ಏನೇ ತೊಂದರೆ ಕೊಟ್ಟರೂ ಮೇಲೆ ದೇವರೊಬ್ಬ ಇದ್ದಾನೆ. ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಮುಂದಿನ ಅವಧಿಗೂ ಕಾಂಗ್ರೆಸ್ ಸರಕಾರ :

ಕಾಂಗ್ರೆಸ್ ಸರಕಾರ 136 ಸ್ಥಾನಗಳನ್ನು ಹೊಂದಿದ್ದು, ಈ ಬಳ್ಳಾರಿಯಲ್ಲಿ 5 ಕ್ಷೇತ್ರಗಳು ಹಾಗೂ ಲೋಕಸಭೆ ಸ್ಥಾನ ಗೆದ್ದಿದ್ದೇವೆ. ಮುಂದಿನ ಅವಧಿಯಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ. ಇದಕ್ಕೆ ನೀವು ಆಶೀರ್ವಾದ ಮಾಡಬೇಕು. ಕಮಲ ಕೆರೆಯೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ಅನ್ನಪೂರ್ಣ ಅವರಿಗೆ ಆಶೀರ್ವಾದ ಮಾಡಿ ಇಡೀ ಸರಕಾರ ಅವರಿಗೆ ಬೆಂಬಲವಾಗಿ ನಿಂತು ನಿಮ್ಮ ಸೇವೆ ಮಾಡಲಿದೆ. ನಾವು ಇದುವರೆಗೆ ನಿಮಗೆ ಮಾಡಿರುವ ಅಲ್ಪಸ್ವಲ್ಪ ಸೇವೆಗೆ ಕೂಲಿ ಕೇಳುತ್ತಿದ್ದೇವೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News