ಸಂಡೂರಿನಲ್ಲಿ ನಿಶ್ಚಿತವಾಗಿ ಕಮಲ ಅರಳಲಿದೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ : ವಿಜಯೇಂದ್ರ
ಬೆಂಗಳೂರು : ನಾಡಿನ ಜನವಿರೋಧಿ, ಬಡವರ ವಿರೋಧಿ, ರೈತವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮೂರು ಕ್ಷೇತ್ರಗಳಲ್ಲಿ ಮತದಾರರು ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಶುಕ್ರವಾರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಮಾತನಾಡಿದ ಅವರು, ‘ಸಂಡೂರಿನಲ್ಲಿ ಬಿಜೆಪಿಯ ಯುವ ಮುಖಂಡ ಬಂಗಾರು ಹನುಮಂತುರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಸಂಡೂರಿನಲ್ಲಿ ಪಕ್ಷದ ಹಿರಿಯರೆಲ್ಲ ಸೇರಿದ್ದಾರೆ. ಬಿಜೆಪಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ. ಜೆಡಿಎಸ್ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.
ಸಂಡೂರಿನಲ್ಲಿ ಹಿಂದೆಂದೂ ಬಿಜೆಪಿಯ ಕಮಲ ಅರಳಿಲ್ಲ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ, ಎಲ್ಲ ಶಾಸಕರು, ಮಾಜಿ ಶಾಸಕರ, ಪರಿಷತ್ ಸದಸ್ಯರ, ಪಕ್ಷದ ಹಿರಿಯರ ಶ್ರಮದಿಂದ ಮೊದಲ ಬಾರಿಗೆ ಇಲ್ಲಿ ನಿಶ್ಚಿತವಾಗಿ ಬಿಜೆಪಿಯ ಕಮಲ ಅರಳಲಿದೆ. ಬಿಜೆಪಿ-ಜೆಡಿಎಸ್ ಶ್ರಮದಿಂದ ಗೆಲುವು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಸಂಡೂರಿನಲ್ಲಿ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಎಲ್ಲ ಪ್ರಮುಖರ ಸಮ್ಮುಖದಲ್ಲಿ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ ಎಂದರು.