ಬಿಜೆಪಿಯು ಕರ್ನಾಟಕಕ್ಕೆ ಚೊಂಬು ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ : ರಾಹುಲ್ ಗಾಂಧಿ
ಬಳ್ಳಾರಿ : ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಚೊಂಬು ಪಾರ್ಟಿ ಜನರಿಗೆ ಖಾಲಿ ಚೊಂಬು ಕೊಟ್ಟಿದೆ ಎಂದು ಚೊಂಬು ಹಿಡಿದು ರಾಹುಲ್ ಗಾಂಧಿ ಬಿಜೆಪಿಯನ್ನು ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಬರ ಪರಿಹಾರ ಕೇಳಿದಾಗಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಖಾಲಿ ಚೊಂಬು ಬಿಟ್ಟರೆ ಬೇರೇನೂ ಕೊಟ್ಟಿಲ್ಲ. ರಾಜ್ಯ ಸರ್ಕಾರವು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ 100 ರೂ ಕೊಟ್ಟರೆ ಅದರಲ್ಲಿ 13 ರೂ. ಮಾತ್ರ ಹಿಂದೆ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ ಪದವಿ ಮುಗಿದ ಕೂಡಲೇ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯ ಕೌಶಲ ತರಬೇತಿ ನೀಡುತ್ತೇವೆ. ದೇಶ ವ್ಯಾಪಿಸಿರುವ ನಿರುದ್ಯೋಗ ಸಮಸ್ಯೆ ಕೊನೆಗಾಣಿಸಲು ಕ್ರಮ ಕೈಗೊಳ್ಳುತ್ತೇವೆ. ಯುವಕರಿಗೆ ಅಗತ್ಯ ಆರ್ಥಿಕ ನೆರವನ್ನು ನೀಡಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುತ್ತೇವೆ ಎಂದು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ 20ಕ್ಕೂ ಹೆಚ್ಚು ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿಲ್ಲ. ನಮ್ಮ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ರೈತರ ಸಾಲಮನ್ನಾ ಮಾಡಲಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ನಿಗದಿಪಡಿಸಲಿದೆ’ ಎಂದು ಭರವಸೆ ನೀಡಿದರು
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ, ಸಚಿವರಾದ ನಾಗೇಂದ್ರ, ಸಂತೋಷ್ ಲಾಡ್, ಝಮೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.