ಜನಾರ್ದನ ರೆಡ್ಡಿ ಜುಜುಬಿ ರಾಜಕಾರಣಿ, ಬಳ್ಳಾರಿಯಲ್ಲಿ ನಿಮ್ಮ ಅಟ್ಟಹಾಸ ಮುರಿದದ್ದು ನಾನು : ಸಿದ್ದರಾಮಯ್ಯ ವಾಗ್ದಾಳಿ

Update: 2024-11-09 10:32 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂಡೂರು : "ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ. ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದ್ದೀರಿ. ನಿಮ್ಮ ಅಟ್ಟಹಾಸ ಮುರಿದದ್ದು, ಬಳ್ಳಾರಿ ಜಿಲ್ಲೆಯ ಮಹಾ ಜನತೆಯನ್ನು ಭಯಮುಕ್ತಗೊಳಿಸಿದ್ದು ಇದೇ ಸಿದ್ದರಾಮಯ್ಯ ಅನ್ನೋದನ್ನು ಮರೀಬೇಡಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.

ಸಂಡೂರಿನ ವಿಠಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರ ಪರವಾಗಿ ಪ್ರಚಾರ ಸಭೆಯಲ್ಲಿ, ತಮ್ಮ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಜನಾರ್ದನರೆಡ್ಡಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

"ರೆಡ್ಡಿಯವರೇ, ಕರ್ನಾಟಕ ರಾಜ್ಯ ರಾಜಕಾರಣಕ್ಕೆ ನನ್ನ ಕೊಡುಗೆ ಏನು ? ನಿಮ್ಮ ಕೊಡುಗೆ ಏನು? ನೀವೇನು ಬಳ್ಳಾರಿ ಯಜಮಾನರಾ? ಮತ ಹಾಕುವ ಬಳ್ಳಾರಿಯ ಜನ, ಸಂಡೂರಿನ ಜನ ನಮ್ಮ ಯಜಮಾನರು, ನೆನಪಿರಲಿ. ನಾನು ಗಂಗಾವತಿಗೆ ಪ್ರಚಾರಕ್ಕೆ ಹೋಗಲು ಆಗಲಿಲ್ಲ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರಿಯಾದ ಪ್ರಚಾರ ಮಾಡಲಿಲ್ಲ. ಹೀಗಾಗಿ ನೀವು ಗೆದ್ರಿ. ನಿಮ್ಮ ಈ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗಿಲ್ಲ" ಎಂದು ಹೇಳಿದರು.

"ಈ ಹಿಂದೆ ನಿಮ್ಮ ಸರಕಾರ ಇದ್ದಾಗ ನನಗೆ ಬಳ್ಳಾರಿಯಲ್ಲಿ ಮಾತನಾಡಲು ಜಾಗ ಕೊಟ್ಟಿರಲಿಲ್ಲ. ನನಗೆ ಕುಡಿಯೋದಕ್ಕೆ ನೀರು ಕೇಳಿದ್ರೂ ಜನ ನೀರು ಕೊಡುವುದಕ್ಕೆ ಭಯ ಪಡ್ತಾ ಇದ್ರು. ನಮ್ಮ ಯಜಮಾನರಾದ ಬಳ್ಳಾರಿ ಜನರನ್ನು ಇಷ್ಟು ಭಯದಲ್ಲಿ ಇಟ್ಟಿದ್ರಲ್ಲಾ , ಯಾವ ಮುಖ ಹೊತ್ತುಕೊಂಡು ಇದೇ ಜನರ ಬಳಿ ಮತ ಕೇಳಲು ಬಂದಿದ್ದೀರಿ? ನಾಚಿಕೆ ಆಗೋದಿಲ್ವಾ ನಿಮಗೆ" ಎಂದು ಖಾರವಾಗಿ ಪ್ರಶ್ನಿಸಿದರು. 

Full View

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News