ಬೀದರ್ | ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಅಮೃತರಾವ ಚಿಮಕೋಡೆ
ಬೀದರ್ : ಜಿಲ್ಲೆಯ ಜನ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ, ಸ್ತ್ರೀ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳಿಂದ ಬಡವರು, ಕೂಲಿ ಕಾರ್ಮಿಕ ಮತ್ತು ನಿರುದ್ಯೋಗಿ ಯುವಕರ ಬದುಕಿಗೆ ಅಸರೆಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯೋಜನೆಗಳಿಗೆ ನೊಂದಾಯಿಸಿಕೊಂಡ ಜನರಿಗೆ ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳು ದೊರಕಿಸಿಕೊಡಬೇಕು. ಹಾಗೆಯೇ ಎಲ್ಲಾ ಯೋಜನೆಗಳನ್ನು ಪಂಚಾಯತ್ ಗಳ ಮುಖಾಂತರ ಡಂಗೂರ ಸಾರಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಡಾ.ಗಿರೀಶ ಬದೋಲೆ ಮಾತನಾಡಿ, ನ್ಯಾಯಬೆಲೆ ಅಂಗಡಿಗೆ ಸರಿಯಾಗಿ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದೆ. ಹಾಗೆಯೇ ಅಕ್ರಮ ಅಕ್ಕಿ ಸಾಗಣೆ ಮಾಡುವವರ ಮತ್ತು ಅದಕ್ಕೆ ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ವಹಿಸಬೇಕೆಂದು ಆಹಾರ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಒಟ್ಟು 3,43,703 ಪಡಿತರ ಚೀಟಿಗಳಿವೆ. ಅನ್ನಭಾಗ್ಯ ಯೋಜನೆಗೆ 3,06,615 ಅರ್ಹ ಪಡಿತರ ಚೀಟಿಗಳಿವೆ. ಒಟ್ಟು 12,56,066 ಯೋಜನೆಯ ಫಲಾನುಭವಿಗಳಿದ್ದಾರೆ. ಡಿಬಿಟಿ ಪಾವತಿಗೆ 11,51,872 ಅರ್ಹ ಪಡಿತರ ಚೀಟಿಗಳು ಇದ್ದು, ಆಗಸ್ಟ್ ತಿಂಗಳವರೆಗೆ ಒಟ್ಟು 18,80,19,000 ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಸೆಪ್ಟೆಂಬರ್ ತಿಂಗಳವರೆಗೆ 3,24,542 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜೂ.11 ರಿಂದ ನ.30 ರವರೆಗೆ ಮಹಿಳೆಯರು ಮತ್ತು ಬಾಲಕಿಯರು ಸೇರಿ 5,95,27,326 ಜನರು ಸೌಲಭ್ಯ ಪಡೆದಿದ್ದಾರೆ. ಪ್ರತಿದಿನ ಸರಾಸರಿ 1 ಲಕ್ಷ 11 ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದು, 30,42,000 ರೂ. ಸಾರಿಗೆ ಇಲಾಖೆಗೆ ಆದಾಯ ಸಂದಾಯವಾಗಿರುತ್ತದೆ. ಗೃಹಜ್ಯೋತಿ ಯೋಜನೆಯಲ್ಲಿ 3,38,415 ಜನರು ಇದರ ಲಾಭ ಪಡೆದಿದ್ದಾರೆ. ಯುವನಿಧಿ ಯೋಜನೆಯಡಿ 5,034 ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ವರೆಗೆ 6,01,54,500 ರೂ. ಪದವಿಧರ ನಿರುದ್ಯೋಗ ಯುವಕ, ಯುವತಿಯರಿಗೆ ಪಾವತಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಉಪಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.