ಬೀದರ್ | ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯಕ : ಗುರುನಾಥ ರಾಜಗೀರಾ
ಬೀದರ್ : ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯಕವಾಗಿದೆ ಎಂದು ಇಂಟರ್ ನ್ಯಾಷನಲ್ ನ್ಯಾಚುರೋಪತಿ ಸಂಸ್ಥೆಯ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ಅಭಿಪ್ರಾಯ ಪಟ್ಟರು.
ನಗರದ ಸಿದ್ಧಾರೂಢ ಮಠದ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ದಿನನಿತ್ಯ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಹಣ ಮತ್ತು ಆಸ್ತಿ ಇದ್ದವರು ಶ್ರೀಮಂತರಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು. ಎಲ್ಲರೂ ಉತ್ತಮ ಆರೋಗ್ಯದಿಂದ ಇರಬೇಕು ಎಂದು ಬಯಸುತ್ತಾರೆ. ಆದರೆ ಯಾರೂ ಕೂಡ ಆರೋಗ್ಯದ ಸೂತ್ರಗಳನ್ನು ಪಾಲನೆ ಮಾಡುವುದಿಲ್ಲ. ಶಿಸ್ತುಬದ್ಧ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಯೋಗೇಂದ್ರ ಯದಲಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿ, ಪತಂಜಲಿ ಯೋಗ ಸಮಿತಿ ವತಿಯಿಂದ ಜಿಲ್ಲೆಯ ಮನೆ - ಮನೆಗಳಿಗೆ ಯೋಗ ತಲುಪಿಸಬೇಕು. ಪತಂಜಲಿ ಯೋಗ ಸಮಿತಿ ವತಿಯಿಂದ ಡಿ.3 ರಿಂದ 18ರವರೆಗೆ ಪ್ರತಿದಿನ ಬೆಳಿಗ್ಗೆ 5:30 ಗಂಟೆಯಿಂದ 7:00 ಗಂಟೆಯವರೆಗೆ ಯೋಗ ಶಿಕ್ಷಕರ ತರಬೇತಿ ಶಿಬಿರ ನಡೆಯಲಿದೆ. ಆಸಕ್ತರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.