ಬೀದರ್ | ಪಿಎನ್‌ಜಿ ಸಂಪರ್ಕ ಉದ್ಘಾಟನೆ
ಬೀದರ್ : ನಗರದ ಶ್ರೀ ಗುರುದ್ವಾರ ಶ್ರೀ ನಾನಕ್ ಝಿರಾ ಸಾಹೆಬ್ ಲಂಗರನಲ್ಲಿ ಸ್ಥಾಪಿಸಲಾಗಿರುವ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್ಜಿ) ಸಂಪರ್ಕವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಗಳನ್ನು ಬೆಂಬಲಿಸುವಾಗ ನಾಗರಿಕ ಜೀವನ ಗುಣಮಟ್ಟ ಸುಧಾರಣೆಗೆ ಸುಸ್ಥಿರ ಇಂಧನದ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಹೇಳಿದರು.
ಗ್ರಾಹಕರ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಲು ಬಿಪಿಸಿಎಲ್ ಸಹಾಯವಾಣಿ ಪ್ರಾರಂಭಿಸಲಾಗಿದೆ. ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಗ್ಯಾಸ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈರ್ಸಗಿಕ ಅನಿಲ ಸಂಪರ್ಕವನ್ನು ಸ್ಥಾಪಿಸಿರುವುದಕ್ಕೆ ಬಿಪಿಸಿಎಲ್ ಕಂಪನಿಯ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಸಿಜಿಡಿ ಯೋಜನೆಯು ಸ್ವಚ್ಛವಾದ, ವೆಚ್ಚ ಪರಿಣಾಮಕಾರಿ ಮತ್ತು ಸುರಕ್ಷಿತ ಇಂಧನ ಪರಿಹಾರಗಳತ್ತ ಒಂದು ಮಹತ್ತರ ಹೆಜ್ಜೆಯನ್ನಾಗಿ ಪ್ರತಿನಿಧಿಸುತ್ತದೆ. ಇದು ಹಸಿರು ಮತ್ತು ಹೆಚ್ಚು ಶಕ್ತಿ ಸಮರ್ಥ ಭವಿಷ್ಯದ ದೃಷ್ಟಿ ಹೊಂದಲಾಗಿದೆ. ಭಾರತ ಪೆಟ್ರೋಲಿಯಂ ಕಾರ್ಪೊರೇಟ್ ಲಿಮಿಟೆಡ್ (ಬಿಪಿಸಿಎಲ್) ನೇತೃತ್ವದಲ್ಲಿ ಸಿಜಿಡಿ ಯೋಜನೆಯು ಬೀದರ್ ಭೌಗೋಳಿಕ ಪ್ರದೇಶದಲ್ಲಿ ಸಮಗ್ರ ಅನಿಲ ಜಾಲವನ್ನು ಅಭಿವೃದ್ಧಿ ಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಭಾಗವಾಗಿರುತ್ತದೆ. ಈ ಸಂಕುಚಿತ ನೈಸರ್ಗಿಕ ಅನಿಲ ಕೇಂದ್ರಗಳು ಮತ್ತು ಸಿ.ಎನ್.ಜಿ. ಹಾಗೂ ಪಿ.ಎನ್.ಜಿ.ಯನ್ನು ದೇಶೀಯ, ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ತಲುಪಿಸಲು ಸದರಿ ಕಂಪನಿಯು ಗುರಿಯನ್ನಾಗಿಸಿಕೊಂಡಿದೆ ಎಂದರು.
ಪ್ರಸ್ತುತ ಬೀದರ್ ಜಿಲ್ಲೆಯ ಆರು ತಾಲ್ಲೂಕುಗಳನ್ನು ಒಳಗೊಂಡು 14 ಸಿ.ಎನ್.ಜಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಿಪಿಸಿಎಲ್ ವತಿಯಿಂದ 2025ರ ಮಾರ್ಚ್ ತಿಂಗಳ ಒಳಗಾಗಿ ಇನ್ನೂ ಎಂಟು ನಿಲ್ದಾಣಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಿಕೊಂಡಿದೆ. ಇದು ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ಹೆಜ್ಜೆಯಾಗಲಿದೆ. ವಾತಾವರಣ ಸಂರಕ್ಷಣೆಯಲ್ಲಿಯೂ ತುಂಬಾ ಅನುಕೂಲವಾಗಲಿದೆ. ಸಿ.ಎನ್.ಜಿ. ವಾಹನಗಳ ಜೊತೆಗೆ 500ಕ್ಕೂ ಹೆಚ್ಚು ದೇಶೀಯ ಮನೆಗಳು ಮತ್ತು ಐದಾರು ವಾಣಿಜ್ಯ ಸಂಸ್ಥೆಗಳಿಗೆ ಪಿ.ಎನ್.ಜಿ. ಸಂಪರ್ಕಗಳನ್ನು ವಿಸ್ತರಿಸಲಾಗಿದೆ. 2040ನೇ ಸಾಲಿನವರೆಗೆ ಶೂನ್ಯ ಹೊರಸೋಸುವಿಕೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯಕ್ಕೂ ಸಹ ಸೇವೆ ಕಲ್ಪಿಸುವ ಗುರಿಯನ್ನು ಈ ಕಂಪನಿಯು ಹೊಂದಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಎಲ್.ಪಿ.ಜಿ. ಸಿಲಿಂಡರ್ಗಳನ್ನು ಹೋಲಿಸಿದರೆ ವಾಣಿಜ್ಯ ಗ್ರಾಹಕರು ನಿರ್ದಿಷ್ಟವಾಗಿ ಶೇ.40 ವೆಚ್ಚದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಜೊತೆಗೆ ವರ್ಧಿತ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪಿ.ಎನ್.ಸಿ.ಯನ್ನು ಎಲ್.ಪಿ.ಜಿ., ಪೆಟ್ರೋಲ್, ಡೀಸೆಲ್ ಮತ್ತು ಇತರೆ ಸಾಂಪ್ರದಾಯಿಕ ಇಂಧನಗಳಿಗೆ ಸುರಕ್ಷಿತ ಪರ್ಯಾಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಈ ಯೋಜನೆಯಿಂದ ನಿಯಂತ್ರಿತ ವಿತರಣೆ ಮತ್ತು ಸೋರಿಕೆಯ ಅಪಾಯ ಸಹ ಕಡಿಮೆ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಪಿಸಿಎಲ್ ಕಂಪನಿಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿಪಿಸಿಎಲ್ ಸಹಾಯವಾಣಿ : 9901693254