ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ : ವಿಜಯೇಂದ್ರ
ಬೀದರ್ : ‘ಮುಡಾ’ ಹಗರಣದ ವಿಷಯ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಮುಖ್ಯಮಂತ್ರಿಯವರು ಹಗರಣ ಆಗಿಲ್ಲ, ಅಕ್ರಮ ನಡೆದಿಲ್ಲ ಎಂದಿದ್ದರು. ನಮ್ಮ ಪಾದಯಾತ್ರೆ ಬಳಿಕ ಸಿಎಂ ಸ್ಥಾನಕ್ಕೆ ಕುತ್ತು ಬರುವ ಭಯದಿಂದ 14 ನಿವೇಶನ ವಾಪಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೀದರ್‌ನಲ್ಲಿ ಬುಧವಾರ ವಕ್ಫ್ ಸಂಬಂಧಿತ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಡಾದಲ್ಲಿನ ತಮ್ಮ ಪತ್ನಿಯ 14 ನಿವೇಶನ ವಾಪಸ್ ಕೊಡಲು 62 ಕೋಟಿ ಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರು. ಬಿಜೆಪಿ ಹೋರಾಟದ ಫಲವಾಗಿ ಒಂದು ರೂಪಾಯಿ ಪಡೆಯದೆ ಅಕ್ರಮ ಸೈಟ್‍ಗಳನ್ನು ವಾಪಸ್ ಕೊಡಲು ಸಿಎಂ ಪತ್ನಿ ಪತ್ರ ಬರೆದಿದ್ದಾರೆ. ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಜನರಿಗೆ ನ್ಯಾಯ ಕೊಡಲು ಮುಂದಾಗಿದ್ದೇವೆ ಎಂದರು.
ಸಚಿವ ಝಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಆದೇಶದ ಮೇರೆಗೆ ರೈತರ ಜಮೀನಿನ ಹೆಸರನ್ನು ವಕ್ಫ್ ಎಂದು ಮಾಡಲು ಸೂಚಿಸಿದ್ದರು. ಯಾತಕ್ಕೋಸ್ಕರ ನಿಮಗೆ ರೈತರು, ಹಿಂದೂಗಳ ಮೇಲೆ ಸಿಟ್ಟು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ದೇವಾಲಯಕ್ಕೂ ನೋಟಿಸ್ ಬಂದಿದೆ. ಗ್ರಾಮಕ್ಕೆ ಗ್ರಾಮವನ್ನೇ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ತಲತಲಾಂತರದಿಂದ ವ್ಯವಸಾಯ ಮಾಡುವ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಅಧಿಕಾರದ ದರ್ಪ, ಮದದಿಂದ ಮೆರೆಯುವ, ರೈತರ ಕಣ್ಣಲ್ಲಿ ನೀರು ತರುವ ಈ ಸರಕಾರವು ರೈತರ ಪರವಾಗಿಲ್ಲ. ಬಿಜೆಪಿ ನಿಮ್ಮ ಪರವಾಗಿ ಹೋರಾಟ ಮಾಡಲಿದೆ. ರೈತರ ಪರವಾಗಿ ಹೋರಾಟ ಮಾಡಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಸಿದ್ದರಾಮಯ್ಯರ ಸರಕಾರವು ದುರ್ಬಳಕೆ ಮಾಡಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಹೋರಾಟವನ್ನೂ ಮಾಡಿದ್ದೇವೆ. ಹಣ ದೋಚಿ, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ದುರ್ಬಳಕೆ ಸಂಬಂಧ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೆವು ಎಂದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ಪ್ರಭು ಚೌಹಾಣ್, ರೇಣುಕಾಚಾರ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಶರಣು ಪಾಟೀಲ, ಬಸವರಾಜ ಮತ್ತಿಮೊಡ, ಶಶೀಲ್ ನಮೋಶಿ ಸೇರಿ ಪ್ರಮುಖರು ಇದ್ದರು.
"ನಮ್ಮ ಭೂಮಿ ನಮ್ಮ ಹಕ್ಕು
— Vijayendra Yediyurappa (@BYVijayendra) December 4, 2024
ಜನಜಾಗೃತಿ ಅಭಿಯಾನಕ್ಕೆ ಚಾಲನೆ"
ಬೀದರ್'ನ ಗಾಂಧಿ ಗಂಜ್ ನಲ್ಲಿ 'ನಮ್ಮ ಭೂಮಿ ನಮ್ಮ ಹಕ್ಕು' ವಕ್ಫ್ ವಿರುದ್ಧದ ಬೃಹತ್ ಜನಾಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಬೃಹತ್ ಪಾದಯಾತ್ರೆಯಲ್ಲಿ ರೈತರೊಂದಿಗೆ ಹೆಜ್ಜೆ ಹಾಕಲಾಯಿತು. ರೈತರ, ಬಡವರ, ಮಠ - ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್ಫ್ ಬೋರ್ಡ್ ಹೆಸರಿನಲ್ಲಿ… pic.twitter.com/C81cLqMVph