ಬೀದರ್ | ಮೃತ ಗುತ್ತಿಗೆದಾರ ಸಚಿನ್ ಪಾಂಚಾಳ್ ನಿವಾಸಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ; 10 ಲಕ್ಷ ರೂ. ಪರಿಹಾರ ಘೋಷಣೆ
ಬೀದರ್ : ಮೃತ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ನಿವಾಸಕ್ಕೆ ಪರಿಸರ ವಿಜ್ಞಾನ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿ, 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಭಾಲ್ಕಿ ತಾಲ್ಲೂಕಿನ ಕಟ್ಟಿ ತುಗಾಂವ್ ಗ್ರಾಮದ ಮೃತ ಕುಟುಂಬದ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು ಬಹಳ ದುಃಖ ಮತ್ತು ನೋವಿನ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ನಾನು ಮತ್ತು ನಮ್ಮ ಸರಕಾರ ಸಚಿನ್ ಅವರ ಕುಟುಂಬದವರ ಜೊತೆಯಲ್ಲಿದ್ದೇವೆ. ಅವರ ದುಃಖದಲ್ಲಿ ನಾವೂ ಕೂಡ ಭಾಗಿಯಾಗಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಸಚಿನ್ ಅವರ ಕುಟುಂಬದವರ ಜೊತೆ ನಾನು ಸಮಾಲೋಚನೆ ನಡೆಸಿ ಎಲ್ಲ ವಿಷಯವನ್ನು ತಿಳಿದುಕೊಂಡಿದ್ದೇನೆ. ಸಚಿನ್ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಬಂದ ನಂತರ, ಸಚಿನ್ ಅವರ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಸಹ ಸಕಾಲದಲ್ಲಿ ಪೊಲೀಸರು ಅವರ ದೂರನ್ನು ಸ್ವೀಕಾರ ಮಾಡಲಿಲ್ಲ ಎನ್ನುವ ಮಾಹಿತಿ ದೊರೆತಿದೆ. ಈ ವಿಷಯದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ಅವರು ಈಗಾಗಲೇ ಕೆಲವೊಂದು ಪೊಲೀಸರ ಮೇಲೆ ಕ್ರಮ ಕೈಗೊಂಡು, ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ನಾನು ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದೇನೆ. ಸಚಿನ್ ಅವರ ಡೆತ್ ನೋಟ್ ಅಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ಬಗ್ಗೆ ಮಾಹಿತಿ ಇದೆ. ಇದರ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗುತ್ತದೆ ಎಂದು ತಿಳಿಸಿದರು.