ಬೀದರ್: ಬೈಕ್ ಗೆ ಟ್ರ್ಯಾಕ್ಟರ್ ಢಿಕ್ಕಿ; ಯುವಕ ಮೃತ್ಯು
Update: 2024-12-31 06:15 GMT
ಬೀದರ್ : ಟ್ರ್ಯಾಕ್ಟರ್-ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕನೊಬ್ಬ ಮೃತಪಟ್ಟಿದ್ದು,ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲೂಕಿನ ಬಾಜೋಳಗಾ (ಕೆ) ಗ್ರಾಮದ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಮರೂರ್ ಗ್ರಾಮದ ಪ್ರಶಾಂತ್ (18) ಮೃತಪಟ್ಟ ಯುವಕ. ಕನಿಲ್ (45) ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಪ್ರಶಾಂತ್ ಮತ್ತು ಕನಿಲ್ ಮಧ್ಯರಾತ್ರಿ ಬಸವಕಲ್ಯಾಣದಿಂದ ಭಾಲ್ಕಿ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದರು. ಬಾಜೋಳಗಾ (ಕೆ) ಮತ್ತು ದಾಡಗಿ ಗ್ರಾಮದ ಮಧ್ಯೆ ಟ್ರ್ಯಾಕ್ಟರ್ ಇವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಪ್ರಶಾಂತ್ ಸ್ಥಳದಲ್ಲೇ ಸಾವನಪ್ಪಿದ್ದು, ಕನಿಲ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಕನಿಲ್ ಗೆ ಭಾಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.