ಬೀದರ್ | ಬೈಕ್-ಕಾರು ನಡುವೆ ಢಿಕ್ಕಿ : ದಂಪತಿ ಮೃತ್ಯು
ಬೀದರ್ : ಬೈಕ್ ಮತ್ತು ಸ್ಕಾರ್ಪಿಯೊ ಕಾರಿನ ನಡುವೆ ಢಿಕ್ಕಿಯಾಗಿ ದಂಪತಿಗಳಿಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಯರಬಾಗ್ ಕ್ರಾಸ್ ಬಳಿ ನಡೆದಿದೆ.
ನಾರಾಣಪುರ ಗ್ರಾಮದ ನಿವಾಸಿಗಳಾದ ಪ್ರಕಾಶ್ ರೇಕುಳಗೆ (50) ಹಾಗೂ ಬಬೀತಾ (45) ಮೃತಪಟ್ಟ ದಂಪತಿಗಳು ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ರಾಷ್ಟ್ರಿಯ ಹೆದ್ದಾರಿ 65 ರಲ್ಲಿ ಬರುವ ಯರಬಾಗ್ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ದಂಪತಿಗಳು ಬೈಕ್ ಮೇಲೆ ಇಟಗಾ ಗ್ರಾಮಕ್ಕೆ ತೆರಳುತ್ತಿದ್ದಾಗ ಮುಂಬೈ ಕಡೆಯಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ದಂಪತಿಗಳು ಚಲಿಸುತ್ತಿರುವ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಬಬೀತಾ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸ್ಕಾರ್ಪಿಯೋ ಕಾರಿನ ಚಾಲಕನಿಗೆ ಗಾಯವಾಗಿದ್ದು, ಅವರನ್ನು ಹುಮನಾಬಾದ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.