ಬೀದರ್ | ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ; ಬಿಜೆಪಿಯ ನಡೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಬೀದರ್ : ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಪ್ರತಿಭಟನೆ ನಡೆಸಿದೆ.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಎನ್‌ಎಸ್‌ಯುಐ ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ಘೋಷಣೆಗಳು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸಚಿನ್ ಮಲ್ಕಾಪುರೆ ಮಾತನಾಡಿ, ಕೋಮುವಾದಿ ಬಿಜೆಪಿ ಪಕ್ಷ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿಯು ಮಹಿಳಾ ವಿರೋಧಿ ಮತ್ತು ಸಂವಿಧಾನ ವಿರೋಧಿಯಾದ ಮುನಿರತ್ನ ಅವರಿಗೆ ನೋಟಿಸ್ ಕೂಡ ನೀಡಲಿಲ್ಲ. ಆದರೆ ಇವಾಗ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಬೇಕಂತಲೇ ಪ್ರಿಯಾಂಕ್ ಖರ್ಗೆ ಅವರ ಹೆಸರು ಎಳೆದು ತರುತ್ತಿದೆ. ಮುಂದಿನ ದಿನಗಳಲ್ಲಿ ದಲಿತ ನಾಯಕನೊಬ್ಬ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಆತಂಕದಿಂದ ಬಿಜೆಪಿಯು ಪ್ರಿಯಾಂಕ್ ಖರ್ಗೆ ಅವರನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಸಚೀನ್ ಪಾಂಚಾಳ್ ಅವರ ಸಾವು ನಮ್ಮೆಲ್ಲರಿಗೂ ನೋವು ತಂದಿದೆ. ಈ ಪ್ರಕರಣದ ಸಮಗ್ರ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು. ಈಗಾಗಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ಇದರ ನಡುವೆಯೂ ಬಿಜೆಪಿಯು ಸೇಡಿನ, ಜಾತಿಯ ರಾಜಕೀಯ ಮಾಡುತ್ತಿದೆ. ಬಿಜೆಪಿಯನ್ನು ಈ ರಾಜ್ಯದ ಜನ ಎಂದು ಕ್ಷೇಮಿಸುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಉಪಾಧ್ಯಕ್ಷರಾದ ಮುಕೇಶ್ ಚಲ್ವಾ, ಭೀಮರಾವ್ ಮಾಲಗತ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸಂತೋಷಕುಮಾರ್ ಚಿಮಕೋಡೆ, ನಗರ ಅಧ್ಯಕ್ಷ ಸಿದ್ಧರ್ಥ ಭಾವಿದೊಡ್ಡಿ, ಎನ್‌ಎಸ್‌ಯುಐ ನ VTU ಅಧ್ಯಕ್ಷ ಟಿ ಕೈಫ್, ಜಿಲ್ಲಾ ಕಾರ್ಯದರ್ಶಿಗಳಾದ ಪ್ರಥ್ವಿರಾಜ್ ಮುಧೋಳಕರ್, ಹಾದಿ ಪೈಲ್ವಾನ್, ಸತೀಶ್ ಚಾಲ್ಕೆ, ದೀಪಕ್ ಕಾಂಬ್ಳೆ, ಕಾರ್ಯಕರ್ತರಾದ ಸಚಿನ್, ಅನೀಲ ಚಿಮಕೋಡೆ ಹಾಗೂ ಜಾನ್ಸನ್ ಕೋಟಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.