ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಬಹುಬೇಗನೆ ಪೂರ್ಣಗೊಳಿಸಿ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳನ್ನು ಬಹುಬೇಗನೆ ಪೂರ್ಣಗೊಳಿಸುವಂತೆ ಪರಿಸರ ವಿಜ್ಞಾನ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 2018-19 ರಿಂದ 2023ರವರೆಗೆ ವಿವಿಧ ಇಲಾಖೆಗಳಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳು ಅಪೂರ್ಣ ಹಂತದಲ್ಲಿವೆ. ಮೆಕ್ರೋ ಹಾಗೂ ಮೈಕ್ರೋ ಯೋಜನೆಯ ಎಲ್ಲ ಕಾಮಗಾರಿಗಳು ಬರುವ ಮಾರ್ಚ್ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಎಲ್ಲ ಕಾಮಗಾರಿಗಳ ಗುಣಮಟ್ಟವು ಮೂರನೇ ಹಂತದ ಪಾರ್ಟಿಯ ಮೂಲಕ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರಿಗೆ ಸೂಚಿಸಿದರು.
ವೈದ್ಯಕೀಯ ನಿರ್ದೇಶನಾಲಯಕ್ಕೆ 2020 ರಲ್ಲಿಯೇ 11 ಕೋಟಿ ರೂ. ನೀಡಿದ್ದು, ಈವರೆಗೆ ಖರ್ಚು ಮಾಡದೇ ಇದ್ದ ಹಣ ಮರಳಿಸಲು ಪತ್ರ ಬರೆಯುವಂತೆ ಹೇಳಿದರು. ನಿರ್ಮಿತಿ ಕೇಂದ್ರದಿಂದ 118 ಅಂಗನವಾಡಿ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಅಂಗನವಾಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶಿಕ್ಷಣ ಇಲಾಖೆಗೆ ಮೈಕ್ರೋ ಯೋಜನೆಯಡಿ 2023 ರಲ್ಲಿ 37 ಕಾಮಗಾರಿಗಳಿಗೆ 4.65 ಕೋಟಿ ರೂ. ನೀಡಲಾಗಿದ್ದು, ಅದರ ಕಾಮಗಾರಿಯು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ಲೊರೈಡ್ ಹಾಗೂ ನೈಟ್ರೆಟ್ ರಸಾಯನ ಅಂಶಗಳು ಹೆಚ್ಚಿರುವ ಗ್ರಾಮಗಳ ಪಟ್ಟಿ ಮಾಡಿ ವರದಿ ಪಡೆಯಬೇಕು. ಅಗತ್ಯವಿದ್ದಲ್ಲಿ ಆರ್.ಓ.ಪ್ಲಾಂಟ್ ಅಳವಡಿಸಿ ಈ ರಸಾಯನಿಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಮಾತ್ರ ಆರ್.ಓ.ಪ್ಲಾಂಟ್ ಗಳನ್ನು ಹಾಕಬಹುದು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ತರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು.
ಆರೋಗ್ಯ ಇಲಾಖೆಗೆ 11 ಆಂಬುಲೆನ್ಸ್ ಒದಗಿಸಲಾಗಿದ್ದು, 11 ಚಾಲಕರನ್ನು ಸಹ ಕೆಕೆಆರ್ಡಿಬಿ ಅಡಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸುವ ಕ್ರಮ :
ಇದೇ ಮಾ.21 ರಂದು ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಗಳು ಜರುಗಲಿದ್ದು, ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಹಾಗೂ ಜಿಲ್ಲೆಯ ರ್ಯಾಂಕ್ ಹೆಚ್ಚಳಕ್ಕೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ವಿಶೇಷ ಕಾರ್ಯಾಗಾರ ತರಬೇತಿ ತರಗತಿ ಹಮ್ಮಿಕೊಂಡ ಬಗ್ಗೆ ವಿವರಣೆ ಕೇಳಿದರು.
ಇದಕ್ಕೆ ಉತ್ತರಿಸಿದ ಡಿಡಿಪಿಐ, ಈಗಾಗಲೇ ಎಲ್ಲ ಶಾಲೆಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ದಿನಕ್ಕೆ ಎರಡು ವಿಶೇಷ ತರಗತಿ ಹಾಗೂ ಕಾರ್ಯಾಗಾರ ಹಮ್ಮಿಕೊಂಡು ಅಗತ್ಯವಿರುವ ಎಲ್ಲ ಪರೀಕ್ಷೆಗಳು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬಸವಕಲ್ಯಾಣದಲ್ಲಿ ಗೋಶಾಲೆ ನಿರ್ಮಾಣಕ್ಕೆ ಸರಕಾರವು 50 ಲಕ್ಷ ರೂ. ಅನುದಾನ ನೀಡಲಾಗಿದೆ. ಅದನ್ನು ಆರಂಭಿಸುವಂತೆ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಈವರೆಗೆ ಒಟ್ಟು 3,564 ಕಾಮಗಾರಿಗಳು ಪೂರ್ಣಗೊಂಡಿದ್ದು, 708 ಕಾಮಗಾರಿಗಳು ಪ್ರಗತಿಯಲ್ಲಿವೆ. 436 ಕಾಮಗಾರಿಗಳು ಇನ್ನು ಆರಂಭಿಸಬೇಕಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಬೀದರ್ ಸಹಾಯಕ ಆಯುಕ್ತ ಎಂ.ಡಿ.ಶಖೀಲ್, ಬಸವಕಲ್ಯಾಣ ಸಹಾಯಕ ಆಯಕ್ತ ಮುಕುಲ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.