ಸಾವಿತ್ರಿಬಾಯಿ ಫುಲೆ ಅವರ ಇತಿಹಾಸ ತಿಳಿದುಕೊಳ್ಳುವುದು ತುಂಬಾ ಮಹತ್ವವಾಗಿದೆ : ವಿಠಲದಾಸ್ ಪ್ಯಾಗೆ

Update: 2025-01-03 18:18 GMT

ಬೀದರ್ : ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಶಿಕ್ಷಣದ ಕ್ರಾಂತಿಯನ್ನು ಎಬ್ಬಿಸಿದ ಮಹಾಮಾತೆ ಸಾವಿತ್ರಿಬಾಯಿ ಫುಲೆ ಅವರ ಇತಿಹಾಸವನ್ನು ನಾವೆಲ್ಲರೂ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ವಿಠಲದಾಸ್ ಪ್ಯಾಗೆ ಅಭಿಪ್ರಾಯಪಟ್ಟರು.

ಇಂದು ಪ್ರತಾಪ್ ನಗರದ ಬಾಲಕಿಯರ ವಸತಿ ನಿಲಯದಲ್ಲಿ ʼಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಕಾರ್ಯಕ್ರಮʼದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷದಿಂದ ಭಾರತದಲ್ಲಿ ಶ್ರೇಣಿಕೃತ ವ್ಯವಸ್ಥೆಯ ಶಿಕ್ಷಣ ಪದ್ಧತಿ ರೂಢಿಯಲ್ಲಿತ್ತು. ಮನಸ್ಮೃತಿ ಗ್ರಂಥದ ಮೂಲಕ ಮಹಿಳೆಯರಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಿ ಅವರಿಗೆ ಕೇವಲ ನಾಲ್ಕು ಗೋಡೆಗಳ ಮಧ್ಯ ಉಳಿಯುವ ಹಾಗೆ ಮಾಡಲಾಗಿತ್ತು. ಅದರಿಂದಾಗಿ ಮಹಿಳೆಯರು ಕೇವಲ ಮಕ್ಕಳು ಹೆರುವುದಕ್ಕೆ ಸೀಮಿತವಾಗಿದ್ದರು. ಇವುಗಳನ್ನೆಲ್ಲ ಧಿಕ್ಕರಿಸಿ ಫುಲೆ ದಂಪತಿಗಳು ಮಹಿಳೆಯರಿಗೆ ಶಿಕ್ಷಣ ನೀಡಿದರು ಎಂದು ಹೇಳಿದರು.

ಮಹಿಳೆಯರು ಪುರುಷನಷ್ಟೇ ಸಮಾನವಾದ ಅವಕಾಶಗಳನ್ನು ಪಡೆದುಕೊಂಡು, ಸ್ವತಂತ್ರವಾಗಿ ಜೀವಿಸುತ್ತಿರುವುದು ಕೇವಲ ನಮ್ಮ ಮಹಾಪುರುಷರ ತ್ಯಾಗದಿಂದಲೇ ಹೊರತು ಯಾವುದೇ ದೇವರುಗಳಿಂದಲ್ಲ. ಹಾಗಾಗಿ ಇಂದಿನ ಮಹಿಳೆಯರು ದೇವರನ್ನು ಬಿಟ್ಟು ಸಾವಿತ್ರಿ ಬಾ ಫುಲೆ, ಫಾತಿಮಾ ಶೇಕ್, ಜ್ಯೋತಿಬಾ ಫುಲೆ, ಸಾಹು ಮಹಾರಾಜ್, ಅಂಬೇಡ್ಕರ್ ಅವರ ಇತಿಹಾಸ ತಿಳಿದುಕೊಳ್ಳಬೇಕೆಂದು ನುಡಿದರು.

ಈ ಸಂದರ್ಭದಲ್ಲಿ ಬಸವಣ್ಣ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸರಾಜ್ ಖಂಡ್ರೆ, ವಸತಿ ನಿಲಯ ಮೇಲ್ವಿಚಾರಕಿ ಶೀಲಾ ವಾಡೇಕರ್, BVS ಜಿಲ್ಲಾಧ್ಯಕ್ಷ ಪ್ರದೀಪ್ ನಾಟೆಕರ್, ಭೀಮರಾವ್ ಮಾಲಗತ್ತಿ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News