ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಯ ಮೀಸಲಾತಿಯಲ್ಲಿನ ಅನ್ಯಾಯ ಸರಿಪಡಿಸಲು ಒತ್ತಾಯ
ಬೀದರ್ : ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಮೀಸಲಾತಿ ನೀಡುವಲ್ಲಿ ಅನ್ಯಾಯವಾಗಿದ್ದು, ನ್ಯಾಯ ಒದಗಿಸಿ ಕೊಡಬೇಕು ಎಂದು ಕರ್ನಾಟಕ ದಲಿತ ಸೇನೆ ಒತ್ತಾಯಿಸಿದೆ.
ನಿನ್ನೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯಲ್ಲಿ 148 ಅಂಗನವಾಡಿ ಕಾರ್ಯಕರ್ತೆ ಮತ್ತು 270 ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡದೇ ಅನ್ಯಾಯ ಮಾಡಿದ್ದಾರೆ. ಇದರ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿಯಮದ ಪ್ರಕಾರ ಮೀಸಲಾತಿ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕು. ಒಂದು ವೇಳೆ ಇದರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ದಲಿತ ಸೇನೆಯ ಅಧ್ಯಕ್ಷ ಧನರಾಜ್ ಕೋಳಾರ್, ಉಪಾಧ್ಯಕ್ಷ ಎಂ ಬಸವರಾಜ್, ಕನ್ನಡಪರ ಹೋರಾಟಗಾರ ಗುರುದಾಸ್ ಅಮದಲಪಾಡ್, ಜಾನಸನ್ ಘೋಡೆ ಹಾಗೂ ಸಂಜು ಲಕ್ಷ್ಮಿದೊಡ್ಡಿ ಇದ್ದರು.