ಬೀದರ್ | ಸಮಾಜದಲ್ಲಿ ಮಾನವೀಯತೆಯ ಸಂದೇಶ ಸಾರುವುದೇ ಜಮಾಅತೆ ಇಸ್ಲಾಮೀ ಹಿಂದ್ ನ ಉದ್ದೇಶ : ನಿಜಾಮುದ್ದಿನ್
ಬೀದರ್ : ಬಣ್ಣ, ಭಾಷೆ, ಉಡುಪು ಬೇರೆ ಬೇರೆ ಇದ್ದರೂ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವುದೇ ಜಮಾಅತೆ ಇಸ್ಲಾಮೀ ಹಿಂದ್ ನ ಉದ್ದೇಶವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಮುಹಮ್ಮದ್ ನಿಝಾಮೋದ್ದಿನ್ ತಿಳಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಆಯೋಜಿಸಲಾಗಿದ್ದ ನೂತನ ವರ್ಷದ ಸ್ನೇಹ ಕೂಟದಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದವರಿಗಾಗಿ ನಮ್ಮ ಚಟುವಟಿಕೆಗಳು ನಡೆಯುತ್ತವೆ. ಜಮಾಅತೆ ಇಸ್ಲಾಮೀ ಹಿಂದ್ ಮುಸ್ಲಿಂರಲ್ಲಿ ಧಾರ್ಮಿಕ, ನೈತಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿ ಮಾನವೀಯತೆ ಎಂಬುದನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.
ಯಾವುದೇ ಧರ್ಮದ ಬಗ್ಗೆ ತಪ್ಪು ಕಲ್ಪನೆ ಇರಬಾರದು. ಎಲ್ಲರೂ ಸಹಬಾಳ್ವೆಯಿಂದ ಜೀವಿಸಬೇಕು. ಎಲ್ಲರೂ ಸಹಬಾಳ್ವೆಯಿಂದ ಬದುಕುವ ಉದ್ದೇಶದಿಂದಲೇ ಸದ್ಭಾವನಾ ಮಂಚ ಎಂಬ ಸಂಘಟನೆ ರಚಿಸಿ ಗುರುನಾಥ ವಡ್ಡೆ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಮಾಧ್ಯಮ ಪ್ರಭಾರಿ ಮುಹಮ್ಮದ್ ಆಸಿಫೋದ್ದಿನ್ ಮಾತನಾಡಿ, ರಾಜಕೀಯ ವ್ಯಕ್ತಿಗಳು ಜಾತಿಯತೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ನಾವು ರಾಜಕೀಯದ ಒತ್ತಡಕ್ಕೆ ಮಣಿಯದೆ ಭಾವೈಕ್ಯತೆಯಿಂದ ಜೀವಿಸಬೇಕೆಂಬುದೆ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.