ಬೀದರ್ | ಜ.3ರಂದು ಜಿಲ್ಲಾ ಅರಣ್ಯ ಕಚೇರಿ ಎದುರು ಕೆಆರ್‌ಎಸ್ ಪಕ್ಷದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಬೀದರ್ : ದಲಿತ ರೈತರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳ ಅನ್ಯಾಯ ಖಂಡಿಸಿ ಜ.3ರಂದು ಜಿಲ್ಲಾ ಅರಣ್ಯ ಕಚೇರಿ ಎದುರು ಕೆ ಆರ್ ಎಸ್ ಪಕ್ಷದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ತಿಳಿಸಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ ಮತ್ತು ಡಿ ವರ್ಗದ ಜಮೀನು 1978-79 ರಲ್ಲಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲಿನಿಂದಲೂ ಆ ಜಮೀನಿನಲ್ಲಿ ದಲಿತ ರೈತರು ಉಳುಮೆ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಅಧಿಕೃತವಾಗಿ ನಿಯಮಾನುಸಾರವಾಗಿ ಉಳುಮೆ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದಾರೆ. ಆದರೆ ಇವಾಗ ಅರಣ್ಯ ಇಲಾಖೆಯವರು 1978-79 ರಲ್ಲಿನ ಪಟ್ಟಿಯನ್ನು ಆಧರಿಸಿ ಜಮೀನನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಅರಣ್ಯ ಇಲಾಖೆಯವರು ಉದ್ದೇಶಪೂರ್ವಕವಾಗಿ ಕೆಲವೇ ದಲಿತ ರೈತರ ಪಹಣಿ ಪತ್ರಿಕೆಗಳನ್ನು ರದ್ದುಗೊಳಿಸಿ, ಆ ಜಮೀನು ತೆರವುಗೊಳಿಸುತ್ತಿದ್ದಾರೆ. ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಸಿ ಮತ್ತು ಡಿ ವರ್ಗದ ಜಮೀನು ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಒತ್ತುವರಿ ಮಾಡಿಕೊಂಡಿದ್ದರು ಸಹ ಅರಣ್ಯ ಇಲಾಖೆಯವರ ಅವರ ಜಮೀನು ತೆರವುಗೊಳಿಸದೇ ಇರುವುದರಿಂದ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಎದ್ದು ಕಾಣುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆಯನ್ನು ಖಂಡಿಸಿ ಜ.3ರಂದು ಬೆಳಿಗ್ಗೆ 10 ಗಂಟೆಯಿಂದ ಜಿಲ್ಲಾ ಅರಣ್ಯ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸತ್ಯಾಗ್ರಹಕ್ಕೆ ಅನ್ಯಾಯಕ್ಕೊಳಗಾದ ಜಿಲ್ಲೆಯ ಎಲ್ಲ ರೈತರು, ದಲಿತಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಭಾಗವಹಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜೈಭೀಮ್ ದಳದ ವಿಭಾಗೀಯ ಅಧ್ಯಕ್ಷ ಮಾರುತಿ ಬಿ ಕಂಟೆ, ಸಂಕಲ್ಪ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತುಕಾರಾಮ್ ಗೌರೆ, ಭೀಮ ಟೈಗರ್ ಸೇನೆಯ ಜಿಲ್ಲಾಧ್ಯಕ್ಷ ನರಸಿಂಗ್ ಸಾಮ್ರಾಟ್, ಡಿ ಎಸ್ ಎಸ್ (ಮಾವಳ್ಳಿ ಶಂಕರ ಬಣ) ಜಿಲ್ಲಾಧ್ಯಕ್ಷ ರಮೇಶ್ ಗೌಡ ಸಾಗರ್ ಹಾಗೂ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರತಿನ್ ಕಮಲ್ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.