ಪ್ರಿಯಾಂಕ್ ಖರ್ಗೆಯವರ ಮನೆಗೆ ಮುತ್ತಿಗೆ ಹಾಕಿದರೆ, ನಾವು ಬಿಜೆಪಿ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ : ದಲಿತ ಸಂಘಟನೆಗಳಿಂದ ಎಚ್ಚರಿಕೆ
ಬೀದರ್ : ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯು ವಿನಾಕಾರಣ ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರು ತಂದು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಜ.4 ರಂದು ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿದೆ. ಒಂದು ವೇಳೆ ಬಿಜೆಪಿಯು ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಿದರೆ ನಾವು ಜಿಲ್ಲೆಯಲ್ಲಿರುವ ಬಿಜೆಪಿಯ ನಾಲ್ಕು ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಲಿತ ಸಂಘಟನೆಯ ಮುಖಂಡರು, ಸಚಿನ್ ಪಾಂಚಾಳ ಅವರು ತಮ್ಮ ಡೇಟ್ ನೋಟ್ ನಲ್ಲಿ ಎಲ್ಲಿಯೂ ತಾನು ಗುತ್ತಿಗೆದಾರ ಎಂದು ಹೇಳಿಕೊಂಡಿಲ್ಲ. ಅವರ ಹತ್ತಿರ ಯಾವುದೇ ರೀತಿಯ ಗುತ್ತಿಗೆದಾರರ ಲೈಸನ್ಸ್ ಇಲ್ಲ. ಹಾಗಾಗಿ ಸಚಿನ್ ಒಬ್ಬ ಗುತ್ತಿಗೆದಾರನೇ ಅಲ್ಲ ಎಂದು ಖಚಿತವಾಗಿದೆ. ಅವರು ಬೇರೆಯವರ ಲೈಸೆನ್ಸ್ ನಿಂದ ಟೆಂಡರ್ ಹಾಕುತ್ತೇನೆ ಎಂದು ರಾಜು ಕಪನೂರ್ ಅವರ ಹತ್ತಿರ ಲಕ್ಷಾಂತರ ರೂ. ಪಡೆದಿದ್ದಾರೆ. ಸಚಿನ್ ಯಾವುದೇ ಟೆಂಡರ್ ಹಾಕದೇ ಮೋಸ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿಯವರು ಈ ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಖೇದಕರ ಸಂಗತಿಯಾಗಿದೆ. ಸಚಿನ್ ಪಾಂಚಾಳ ಅವರ ಡೇಟ್ ನೋಟಲ್ಲಿ ಎಲ್ಲಿಯೂ ಪ್ರಿಯಾಂಕ್ ಖರ್ಗೆ ಅವರ ಹೆಸರು ಉಲ್ಲೇಖವಾಗಿಲ್ಲ. ಅದರಲ್ಲಿ ಉಲ್ಲೇಖವಾಗಿದ್ದೆಲ್ಲ ಬಿಜೆಪಿ ನಾಯಕರ ಹೆಸರುಗಳೇ ಇದ್ದಾವೆ. ಇಂತಹ ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ತಿಳಿಯದೆ ಬಿಜೆಪಿ ವಿನಾ ಕಾರಣ ಪ್ರಿಯಾಂಕ್ ಖರ್ಗೆ ಅವರ ಹೆಸರು ಈ ಪ್ರಕರಣದಲ್ಲಿ ಎಳೆದು ತರುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಎಲ್ಲ ಸಮುದಾಯದ ಪ್ರಬಲ ನಾಯಕರಾಗಿದ್ದು, ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಬಹುದು ಎಂಬ ಕೀಳರಿಮೆಯಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ಅವರನ್ನು ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ನಿರಾಟೆ, ಆರ್. ಪಿ. ಐ (ಎ) ರಾಜ್ಯಾಧ್ಯಕ್ಷ ಮಹೇಶ್ ಗೊರನಾಳಕರ್, ಕರ್ನಾಟಕ ಭೀಮ ಸೇನಾ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲದೊಡ್ಡಿ, ಅಂಬೇಡ್ಕರ್ ಯುವಸೇನೆ ರಾಜ್ಯಧ್ಯಕ್ಷ ರಾಜಕುಮಾರ್ ಗುನ್ನಳ್ಳಿ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬರೀಶ್ ಕುದರೆ, ಕರ್ನಾಟಕ ಸ್ವಾಭಿಮಾನಿ ಭೋವಿ (ವಡ್ಡರ್) ವೇದಿಕೆಯ ರಾಜ್ಯಾಧ್ಯಕ್ಷ ಸಂತೋಷ ಏಣಕೂರೆ, ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಜಿಲ್ಲಾಧ್ಯಕ್ಷ ಅಮೃತ್ ಮುತ್ತಂಗಿಕರ್ ಹಾಗೂ ಸುರೇಶ್ ಘಾಂಗ್ರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.