ಬೀದರ್ | ಮುಕ್ಕಣ್ಣ ಕರಿಗಾರರ ಕೃತಿಗಳು ಶರಣರ ಮಹೋನ್ನತ ಜೀವನದ ದರ್ಶನ ಮಾಡಿಸುತ್ತವೆ : ಡಾ.ಗಿರೀಶ್ ಬದೋಲೆ
ಬೀದರ್ : ಬಸವಣ್ಣನವರ ಮಹಾನ್ ಕಾರ್ಯಕ್ಕೆ ಹೆಗಲುಕೊಟ್ಟು ದುಡಿದ ಶರಣರಲ್ಲಿ ಶಿವಯೋಗಿ ಸಿದ್ಧರಾಮ, ಮಡಿವಾಳ ಮಾಚಿದೇವ ಮತ್ತು ಅಂಬಿಗರ ಚೌಡಯ್ಯನವರು ಪ್ರಮುಖರು. ನಮ್ಮ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಈ ಮೂವರು ಶರಣರ ಬಗ್ಗೆ ಸಾಹಿತ್ಯ ರಚಿಸುವ ಮೂಲಕ ಹನ್ನೆರಡನೆಯ ಶತಮಾನದ ಸಮಾಜೋಧಾರ್ಮಿಕ ಸುಧಾರಣೆಯ ಕಾರ್ಯವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ. ಇವರ ಕೃತಿಗಳು ಶರಣರ ಮಹೋನ್ನತ ದರ್ಶನ ಮಾಡಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ನಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದ್ದ ಮುಕ್ಕಣ್ಣ ಕರಿಗಾರ ಅವರ ಮೂರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯ ಚಳುವಳಿ ಜಗತ್ತಿನ ಇತಿಹಾಸದಲ್ಲಿ ಇನ್ನೆಲ್ಲಿಯೂ ಕಂಡು ಬರದ ವಿಸ್ಮಯಕಾರಿಯಾಗಿದೆ. ಇದು ಸಮಾಜ ಸುಧಾರಣೆಯ ಸಾಮೂಹಿಕ ಆಂದೋಲನವಾಗಿದ್ದು, ಬಸವಣ್ಣನವರು ಅಂದೇ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ್ದರು. ಸಮ ಸಮಾಜ, ಸುಖಿ ಸಮಾಜ ಕಟ್ಟಬಯಸಿದ್ದ ಬಸವಣ್ಣನವರು ಜಾತಿರಹಿತ, ವರ್ಗರಹಿತ ಆದರ್ಶ ಸಮಾಜ ಕಟ್ಟಲು ಬಯಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ್ ದುಬೆ, ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ್, ಡಿ ಆರ್ ಡಿ ಎ ಯೋಜನಾ ನಿರ್ದೇಶಕ ಜಗನ್ನಾಥ್ ಮೂರ್ತಿ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಮತ್ತು ಬೀದರ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣಪಾಟೀಲ್, ಅಭಿವೃದ್ಧಿ ವಿಭಾಗದ ಅಧೀಕ್ಷಕ ಮಹಮ್ಮದ್ ಬಶೀರ್, ಹಿರಿಯ ಕವಿ ಎಸ್ ಬಿ ಕುಚಬಾಳೆ ಹಾಗೂ ಪ್ರವೀಣ್ ಸ್ವಾಮಿ ಸೇರಿದಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.