ಬೀದರ್ | ಎನ್‌ಡಿಪಿಎಸ್ ಕಾಯ್ದೆಯಡಿ ವಶಪಡಿಸಿಕೊಂಡಿದ್ದ ಗಾಂಜಾ, ಡಿಸ್ಪೋಸಲ್ ಕಮಿಟಿಯಿಂದ ನಾಶ
ಬೀದರ್ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎನ್ಡಿಪಿಎಸ್ ಕಾಯ್ದೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯಿಂದ ನಾಶಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ, ಸಾಗಾಣಿಕೆ, ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ, ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇಲ್ಲಿವರೆಗೆ ವಶಪಡಿಸಿಕೊಂಡಿದ್ದ ಒಟ್ಟು 5 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ, 712 ಕೆ. ಜಿ ಕ್ಕಿಂತ ಹೆಚ್ಚು ಗಾಂಜಾ ಹಾಗೂ 16 ಕೆ. ಜಿ ಕ್ಕಿಂತ ಹೆಚ್ಚು ಇತರ ಮಾದಕ ವಸ್ತುಗಳು ಇಂದು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ಪಡೆದುಕೊಂಡು ನಿಯಮಾನುಸಾರ ನಾಶಗೊಳಿಸಲು ಕ್ರಮವಹಿಸಿ ಬೀದರ್ ಜಿಲ್ಲೆಯ ಧನ್ನೂರ ಗ್ರಾಮದಲ್ಲಿರುವ ಇನ್ನೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ನಾಶಪಡಿಸಲಾಗಿದೆ ಎಂದು ತಿಳಿಸಲಾಗಿದೆ.