ಯುವಕರು ಶಿವಾಜಿ ಮಹಾರಾಜರ ಆದರ್ಶ, ತತ್ವ ಅಳವಡಿಸಿಕೊಳ್ಳಿ: ಸಚಿವ ಈಶ್ವರ ಖಂಡ್ರೆ

Update: 2025-02-19 19:28 IST

ಬೀದರ್: ರಾಷ್ಟ್ರವೀರ, ಧರ್ಮನಿರಪೇಕ್ಷ, ಜಾತ್ಯಾತೀತ ಮಹಾವೀರ, ಸ್ವದೇಶ ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರ ಆದರ್ಶ ತತ್ವಗಳು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ ಧೈರ್ಯ, ಶೌರ್ಯ, ಮಹಿಳಾ ಗೌರವ, ಜಾತ್ಯಾತೀತ ಮನೋಭಾವನೆ ಇತರೇ ರಾಜರಲ್ಲಿ ಕಾಣುವುದು ತೀರ ವಿರಳ. ಅವರು ರೈತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ಮಾಡಿ ಗೆದ್ದರು. ಗೆರಿಲ್ಲಾ ಯುದ್ಧ ಪರಿಣಿತರಾಗಿದ್ದ ಅವರು ಸ್ವರಾಜ್ಯ ನಿರ್ಮಿಸಿದರು ಎಂದು ತಿಳಿಸಿದರು.

ಶಿವಾಜಿ ಮಹಾರಾಜ್ ಅವರನ್ನು ಹಿಂದವಿ ಸ್ವರಾಜ್ ಅಥವಾ ಧರ್ಮದ ಆಧಾರದ ಮೇಲೆ ಕೆಲ ಜನ ಗೊಂದಲ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದರೆ ಶಿವಾಜಿ ಮಹಾರಾಜ್ ಅವರ ಇತಿಹಾಸ ನೋಡಿದರೆ ಅವರೊಬ್ಬ ಜಾತ್ಯತೀತ, ಧರ್ಮನಿರಪೇಕ್ಷ, ಜನಪರ, ರೈತಪರ ರಾಜರಾಗಿದ್ದರು. ಅವರ ಕೆಲ ಅಂಗರಕ್ಷಕರು ಮುಸ್ಲಿಮರಾಗಿದ್ದರು. ಎಲ್ಲ ಸಮುದಾಯದ ಜನರನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುವ ರಾಜ ಎಂದರೆ ಅದು ಶಿವಾಜಿ ಮಾಹಾರಾಜ್. ಆದರೆ ಇತ್ತೀಚೆಗೆ ಕೆಲವರು ಜಾತಿ ಜಾತಿಗಳಲ್ಲಿ ಕೋಮುದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕು ಎಂದರು.

ಕರ್ನಾಟಕ, ಮಹಾರಾಷ್ಟ್ರದ ಸಂಬಂಧಗಳು ಶತಶತಮಾನಗಳಿಂದಲೂ ಭಾತೃತ್ವ ರೀತಿಯಲ್ಲಿದೆ. ಶಿವಾಜಿ ತಂದೆಯ ಸಮಾಧಿ ದಾವಣಗೆರೆಯಲ್ಲಿದೆ. ಶಿವಾಜಿಯು ಕರ್ನಾಟಕದಲ್ಲಿ ಅನೇಕ ದಿನ ಉಳಿದು ಅನನ್ಯವಾದ ಸಂಬಂಧ ಹೊಂದಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇತ್ತೀಚೆಗೆ ಉತ್ತಮ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ, ಶಿವಾಜಿ ಮಹಾರಾಜರು ಈ ದೇಶ ಕಂಡ ಅತೀ ಪ್ರಸಿದ್ಧ ಮಹಾಪುರುಷರಾಗಿದ್ದಾರೆ. ಶಿವಾಜಿಯು ಯಾರ ವಿರುದ್ಧವೂ ಇರಲಿಲ್ಲ. ಎಲ್ಲ ಸಮುದಾಯ ಒಗ್ಗಟ್ಟು ಮಾಡಿ ರಾಜ್ಯಭಾರ ಮಾಡುತ್ತಿದ್ದರು. ಅವರು ಅನೇಕ ದೊಡ್ಡ ಹುದ್ದೆ ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಿದ್ದರು. ಸಮಾಜದಲ್ಲಿ ವೈವಿದ್ಯತೆ ಇದೆ. ಬೀದರ್ ನಲ್ಲಿ ಎಲ್ಲ ಸಮುದಾಯಗಳು ಶಾಂತಿಯಿಂದ, ಸೌಹಾರ್ದದಿಂದ ಜೀವಿಸುತ್ತಿದ್ದಾರೆ ಎಂದು ನುಡಿದರು.

ಮಹಾರಾಷ್ಟ್ರದ ಮಾಜಿ ಸಂಸದ ಪ್ರೊ.ರವೀಂದ್ರ ವಿಶ್ವನಾಥರಾವ್ ಗಾಯಕವಾಡ್ ಮಾತನಾಡಿ, ದೇವರನ್ನು ಕಾಣುವ ವ್ಯವಸ್ಥೆಯಲ್ಲಿಯೂ ವೈವಿದ್ಯತೆ ಇದೆ. ಬೀದರ್, ಕರ್ನಾಟಕ, ದೇಶ, ವಿದೇಶಗಳಲ್ಲಿಯೂ ಆಯಾ ಪ್ರದೇಶಕ್ಕನುಗುಣವಾಗಿ ದೇವರನ್ನು ಕಾಣುವ ರೀತಿ, ತತ್ವ, ಕಲ್ಪನೆ ವೈವಿದ್ಯಮಯವಾಗಿದೆ. ಆದರೆ ಈ ಮನುಷ್ಯ ಮಾತ್ರ ಎಲ್ಲೆಡೆ ಒಂದೇ ರೀತಿ ಆಗಿದ್ದಾನೆ. ಈ ನೆಲ, ಜಲ, ವಾಯು ಎಲ್ಲರಿಗೂ ಒಂದೇ ಆಗಿದೆ. ರಕ್ತವೂ ಒಂದೇ, ಸಸ್ಯಹಾರ, ಮಾಂಸಾಹಾರ ಅವರವರ ಆಹಾರ ಪದ್ಧತಿಯಷ್ಟೆ. ಎಲ್ಲ ಸಮುದಾಯದವರು ಸೇರಿ ಜಿಲ್ಲೆಯನ್ನು ಅಭಿವೃದ್ಧಿಗೊಳಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ್ ಹಾಗೂ ಈಶ್ವರಸಿಂಗ್ ಠಾಕೂರ್ ಸೇರಿದಂತೆ ಸಮಾಜದ ಗಣ್ಯರಿಂದ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಪಾಟೀಲ್ ಘಾಟಬೋರಾಳ್, ಸಮಾಜದ ಮುಖಂಡರಾದ ಮದನರಾವ್ ಬಿರಾದಾರ್, ರಘುನಾಥ್ ಜಾಧವ್, ಅರ್ಜುನ್ ಬಿಲ್ಲೆ ಹಾಗೂ ಪಂಡಿತ್ ಜಾಧವ್ ಬಾಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News