ಬ್ರ್ಯಾಂಡ್ ಬೆಂಗಳೂರು ಅಭಿಯಾನ; ಅಧಿಕೃತ ವೆಬ್ಸೈಟ್ ಬಿಡುಗಡೆಗೊಳಿಸಿದ ಡಿಸಿಎಂ ಡಿಕೆಶಿ

Update: 2023-06-21 10:26 GMT
Editor : jafar sadik | By : Mushina

ಬೆಂಗಳೂರು:ವಿಕಾಸ ಸೌಧದಲ್ಲಿ ಇಂದು ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ http://brandbengaluru.karnataka.gov.in ಎನ್ನುವ ವೆಬ್ ಪೋರ್ಟಲ್ಅನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕರು, ಬೆಂಗಳೂರಿನ ನಿವಾಸಿಗಳು, ಎನ್ ಆರ್ ಐಗಳು ತಮ್ಮ ಅಭಿಪ್ರಾಯಗಳನ್ನು ಈ ಪೋರ್ಟಲ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಇಲ್ಲಿ ದಾಖಲಾಗುವ ಅಭಿಪ್ರಾಯಗಳ ಕುರಿತು ಪರಾಮರ್ಶೆ ನಡೆಸಿ ಸೂಕ್ತ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ರಸ್ತೆಗುಂಡಿಗಳ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳು, ಬೆಂಗಳೂರಿನಿಂದ ವಿದೇಶಕ್ಕೆ ತೆರಳಿ ನೆಲೆಸಿರುವವರೂ ಕೂಡ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ಗಂಭೀರವಾಗಿ ನೋಡುತ್ತಿದ್ದಾರೆ. ಬೆಂಗಳೂರು ವಿಶ್ವದರ್ಜೆಯ ನಗರಗಳಿಗೆ ಸ್ಪರ್ಧೆಯೊಡ್ಡುವಂತೆ ಮಾಡಬೇಕು. ಇದಕ್ಕಾಗಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಕೆಲವು ನಿವೃತ್ತ ಅಧಿಕಾರಿಗಳು, ಉದ್ಯಮಿಗಳು, ನಿವಾಸಿಗಳು, ಸ್ಥಳೀಯ ಶಾಸಕರು, ಮಾಜಿ ಕಾರ್ಪೊರೇಟರ್ಗಳ ಅಭಿಪ್ರಾಯಗಳನ್ನು ಪಡೆದಿದ್ದೇನೆ ಎಂದರು.

ನಿನ್ನೆಯಷ್ಟೇ ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಂಗಳೂರಿನ ವಿವಿಧ ಜಂಕ್ಷನ್ಗಳಿಗೆ ಭೇಟಿ ನೀಡಿ ಅಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದೇನೆ. ದಿಲ್ಲಿ, ಮುಂಬೈನಲ್ಲಿ ಬೆಂಗಳೂರಿಗಿಂತ ಹೆಚ್ಚು ಟ್ರಾಫಿಕ್ ಸಮಸ್ಯೆ ಇದೆ. ಆದರೆ ಎಲ್ಲರೂ ಬೆಂಗಳೂರಿನ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಏಕೆಂದರೆ ಬೆಂಗಳೂರು ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ಈಗ ಬಿಡುಗಡೆಗೊಳಿಸಿರುವ ಪೋರ್ಟಲ್ನಲ್ಲಿ ಹಳ್ಳಿಯಲ್ಲಿ ನೆಲೆಸಿರುವವರಿಂದ ಹಿಡಿದು ವಿದೇಶದಲ್ಲಿ ನೆಲೆಸಿರುವವರೂ ಸಲಹೆ ನೀಡಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - Mushina

A staff reporter

Web Editor at VarthaBharati

Similar News