2024ರಲ್ಲಿ 281 ನೆರವು ಕಾರ್ಯಕರ್ತರ ಹತ್ಯೆ : ವಿಶ್ವಸಂಸ್ಥೆ

Update: 2024-11-22 16:04 GMT

ಸಾಂದರ್ಭಿಕ ಚಿತ್ರ | PC : PTI

 

ಜಿನೇವಾ : ಪ್ರಸಕ್ತ ವರ್ಷವು ಮಾನವೀಯ ಕಾರ್ಯಕರ್ತರಿಗೆ ಅತ್ಯಂತ ಮಾರಣಾಂತಿಕ ವರ್ಷವಾಗಿ ಪರಿಣಮಿಸಿದ್ದು, ಈವರೆಗೆ ಸುಮಾರು 281 ನೆರವು ಸಂಘಟನೆಗಳ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆಂದು ವಿಶ್ವಸಂಸ್ಥೆಯ ಏಜೆನ್ಸಿಯೊಂದು ಶುಕ್ರವಾರ ತಿಳಿಸಿದೆ.

‘‘ಈ ವರ್ಷ ಮಾನವೀಯ ನೆರವು ಕಾರ್ಯಕರ್ತರು ಹಿಂದೆಂದೂ ಇಲ್ಲದಷ್ಟು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ದಿಟ್ಟತನ ಹಾಗೂ ಮಾನವೀತೆಯು ಬುಲೆಟ್ಗಳು ಹಾಗೂ ಬಾಂಬ್ಗಳ ದಾಳಿಯನ್ನು ಎದುರಿಸಬೇಕಾಯಿತು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ನೂತನ ಅಧೀನ ಕಾರ್ಯದರ್ಶಿ ಹಾಗೂ ತುರ್ತು ಪರಿಹಾರ ಸಮನ್ವಯಕಾರ ಟಾಮ್ ಫ್ಲೆಚರ್ ತಿಳಿಸಿದ್ದಾರೆ. 2024ನೇ ಇಸವಿಯು ಕೊನೆಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ, 2024ರಲ್ಲಿ 33 ದೇಶಗಳಲ್ಲಿ 280 ಮಾನವೀಯ ನೆರವು ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂಸಾಚಾರವು ಪ್ರಜ್ಞಾಹೀನವಾದುದಾಗಿದೆ ಹಾಗೂ ನೆರವು ಕಾರ್ಯಾಚರಣೆಗಳಿಗೆ ವಿನಾಶಕಾರಿಯಾಗಿದೆ ಎಂದು ಫ್ಲೆಚರ್ ಆಘಾತ ವ್ಯಕ್ತಪಡಿಸಿದ್ದಾರೆ.

ಸರಕಾರಗಳು ಹಾಗೂ ಸಂಘಟನೆಗಳು ಮಾನವೀಯ ನೆರವು ಕಾರ್ಯಕರ್ತರನ್ನು ರಕ್ಷಿಸಬೇಕಾಗಿದೆ. ಅಂತರರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿಯಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಾನೂನುಕ್ರಮವನ್ನು ಕೈಗೊಳ್ಳಬೇಕು ಎಂದವರು ಹೇಳಿದ್ದಾರೆ.

ಗಾಝಾದ ಮೇಲೆ ಇಸ್ರೇಲ್ನ ಭೀಕರ ಆಕ್ರಮಣವು ಮಾನವೀಯ ನೆರವು ಕಾರ್ಯರ್ತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಗಾಝಾ ಸಂಘರ್ಷದಲ್ಲಿ ಅಂದಾಜು 333 ನೆರವು ಕಾರ್ಯಕರ್ತರು ಸಾವನ್ನಪಿದ್ದು, ಅವರಲ್ಲಿ ಹೆಚ್ಚಿವರು ಫೆಲೆಸ್ತೀನ್ ನಿರಾಶ್ರಿತರಿಗೆ ನೆರವಾಗುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಗೆ ಸೇರಿದವರೆಂದು ಫ್ಲೆಚರ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನ, ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ, ಸುಡಾನ್, ಅಂತರರಾಷ್ಟ್ರೀಯ ನೆರವು ಏಜೆನ್ಸಿ ಕಾರ್ಯಕರ್ತರು ಗಣನೀಯ ಸಂಖ್ಯೆಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿರುವ ಇತರ ದೇಶಗಳಾಗಿವೆ.

ಮೃತಪಟ್ಟ ನೆರವು ಕಾರ್ಯಕರ್ತರಲ್ಲಿ ಹೆಚ್ಚಿನವರು ಸರಕಾರೇತರ ಸಂಸ್ಥೆಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು, ರೆಡ್ ಕ್ರಾಸ್, ರೆಡ್ ಕ್ರಿಸೆಂಟ್ ಸಂಸ್ಥೆಗಳಿಗೆ ಸೇರಿದವರೆಂದು ಫ್ಲೆಚರ್ ಅವರ ಕಾರ್ಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News