ಮೂರನೇ ವಿಶ್ವ ಮಹಾಯುದ್ಧ ಅಧಿಕೃತವಾಗಿ ಆರಂಭಗೊಂಡಿದೆ :ಉಕ್ರೇನ್ ನ ಮಾಜಿ ಸೇನಾ ವರಿಷ್ಠ ಝಲುಝ್ನಿ
ಕೀವ್ : ಜಗತ್ತು ಮೂರನೇ ವಿಶ್ವಸಮರದ ಹಂತವನ್ನು ಅಧಿಕೃತವಾಗಿ ಪ್ರವೇಶಿಸಿದೆಯೆಂ ಉಕ್ರೇನ್ನ ಮಾಜಿ ಸೇನಾ ವರಿಷ್ಠ ವಲೇರಿ ಝಲುಝ್ನಿ ಹೇಳಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಜಗತ್ತಿನ ಎರಡೂ ಸೂಪರ್ ಪವರ್ಗಳಾದ ರಶ್ಯ ಹಾಗೂ ಅಮೆರಿಕವು ನೇರವಾಗಿ ಪಾಲ್ಗೊಂಡಿರುವುದು ಇದನ್ನು ಸಾಬೀತುಪಡಿಸಿದೆ ಎಂದವವರು ಹೇಳಿದ್ದಾರೆ.
ಉತ್ತರ ಕೊರಿಯಾ, ಇರಾನ್ ಅಲ್ಲದೆ ಸಂಭಾವ್ಯವಾಗಿ ಚೀನಾದಂತಹ ರಾಷ್ಟ್ರಗಳ ಒಳಗೊಳ್ಳುವಿಕೆಯಿಂದಾಗಿ ಈ ಸಂಘರ್ಷವು ಉಕ್ರೇನ್ ಹಾಗೂ ರಶ್ಯದ ನಡುವಿನ ಪ್ರಾದೇಶಿಕ ಸಮರದ ವ್ಯಾಪ್ತಿಯನ್ನು ಮೀರಿ ಉಲ್ಬಣಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಬ್ರಿಟನ್ಗೆ ಉಕ್ರೇನ್ನ ರಾಯಭಾರಿಯಾಗಿರುವ ವಲೇರಿ ಝಲುಝ್ನಿ ಅವರು ‘ಉಕ್ರೇನ್ಸ್ಕಾ ಪ್ರಾವ್ಡಾ’ ಪತ್ರಿಕೆಯ ಯುಪಿ100 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
‘‘2024ರಲಿ ಮೂರನೇ ಜಾಗತಿಕ ಮಹಾಯುದ್ಧವು ಆರಂಭವಾಗಿದೆಯೆಂದು ನಾನು ಖಂಡಿತವಾಗಿಯೂ ನಂಬಿದ್ದೇನೆ. ರಶ್ಯ-ಉಕ್ರೇನ್ ಯುದ್ಧದಲ್ಲಿ ಈಗ ಉತ್ತರ ಕೊರಿಯದ ಸೇನಾಪಡೆಗಳು, ಇರಾನ್ ನ ಡ್ರೋನ್ಗಳು ಬಹಿರಂಗವಾಗಿ ನಾಗರಿಕರ ಮೇಲೆ ದಾಳಿಯಿಡುತ್ತಿರುವುದು, ಉತ್ತರ ಕೊರಿಯ ಹಾಗೂ ಚೀನಾದ ಶಸ್ತ್ರಾಸ್ತ್ರಗಳ ಮಹಾಪೂರವೇ ಸಮರಾಂಗಣಕ್ಕೆ ಹರಿದುಬರುತ್ತಿರುವುದು ಈ ಯುದ್ಧವು ಅಂತರರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿರುವುದಕ್ಕೆ ಪುರಾವೆಯಾಗಿದೆ ’’ಎಂದವರು ಹೇಳಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ 2024ರಲ್ಲಿ ಉಕ್ರೇನ್ ಕೇವಲ ರಶ್ಯವನ್ನು ಮಾತ್ರವೇ ಎದುರಿಸುತ್ತಿಲ್ಲ. ಉತ್ತರ ಕೊರಿಯಾದ ಸೈನಿಕರು ಕೂಡಾ ಉಕ್ರೇನ್ನ ಯುದ್ಧಭೂಮಿಯಲ್ಲಿದ್ದಾರೆ. ಇರಾನ್ನ ಶಾಹೇದ್ ಕ್ಷಿಪಣಿಗಳು ನಿರ್ಲಜ್ಜೆಯಿಂದ ನಾಗರಿಕರ ಮಾರಣ ಹೋಮ ನಡೆಸುತ್ತಿದೆ ಎಂದು ವಲೇರಿ ಝಲುಝ್ನಿ ತಿಳಿಸಿದರು.
ಯುದ್ಧದಲ್ಲಿ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿರುವುದು ಉಕ್ರೇನ್ ಮೇಲಿನ ಒತ್ತಡವನ್ನು ಅಧಿಕಗೊಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉಕ್ರೇನ್ ಯುದ್ದವನ್ನು ತಾಳಿಕೊಳ್ಳಬಹುದು. ಆದರೆ ಬೃಹತ್ ಮಟ್ಟದ ಬೆಂಬಲವಿಲ್ಲದೆ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಉಕ್ರೇನ್ ಸೇನೆ ವಶಪಡಿಸಿಕೊಂಡಿರುವ ಕುರ್ಸ್ಕ್ ಪ್ರಾಂತದ ಮರುಸ್ವಾಧೀನಕ್ಕಾಗಿ ರಶ್ಯ ಹಾಗೂ ಉತ್ತರ ಕೊರಿಯಾವು 50 ಸಾವಿರಕ್ಕೂ ಅಧಿಕ ಯೋಧರನ್ನು ನಿಯೋಜಿಸಿದೆ.
ಝಲುಝ್ನಿ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಸೇನೆಯ ಕಮಾಂಡರ್ ಇನ್ ಚೀಫ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಸಮರತಂತ್ರದ ಕುರಿತಾಗಿ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಭಿನ್ನಾಭಿಪ್ರಾಯವು ಅವರನ್ನು ಸೇನಾಹುದ್ದೆಯಿಂದ ತೆರವುಗೊಳಿಸಲು ಕಾರಣವೆನ್ನಲಾಗಿತ್ತು.